

ಹೈದರಾಬಾದ್: ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಯಂತೆ ಪೋಸ್ ನೀಡಿ ಖದೀಮನೊಬ್ಬ 1 ಕೋಟಿ ರೂಪಾಯಿ ಮೌಲ್ಯದ ಎರಡು BMW ಕಾರುಗಳನ್ನು ಕದ್ದು ಪರಾರಿಯಾಗಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನ ಬೌಲ್ಡರ್ ಹಿಲ್ಸ್ನಲ್ಲಿ ನಡೆದಿದೆ.
ಖ್ಯಾತ ಗಾಯಕ ಬಾದ್ ಷಾ ಅವರ ಲೈವ್ ಕಾನ್ಸರ್ಟ್ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ಹೆಸರು ಅರುಣ್ ರೆಡ್ಡಿ ಎಂದು ತಿಳಿದು ಬಂದಿದ್ದು, ಈತ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ಧಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಶಿಲ್ಪವಲ್ಲಿ BMW ಕಾರುಗಳ ಮೇಲಿನ ಅತಿಯಾದ ಒಲವಿನಿಂದ ಈ ರೀತಿ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಜೂನ್ 24ರಂದು ಆರೋಪಿಯೂ ಬಾದ್ ಷಾ ಅವರ ಲೈವ್ ಕಾನ್ಸರ್ಟ್ನಲ್ಲಿ ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಯಂತೆ ಪೋಸ್ ನೀಡಿ BMW z4 ಹಾಗೂ X5 ಕಾರುಗಳನ್ನು ಕದ್ದು ಪರಾರಿಯಾಗಿದ್ದ.
ಕಾರುಗಳನ್ನು ಕದ್ದ ಬಳಿಕ ಅದನ್ನು ಐಷಾರಾಮಿ ಹೋಟೆಲ್ ಒಂದರಲ್ಲಿ ಪಾರ್ಕಿಂಗ್ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಮಾಲೀಕರು ನೀಡಿದ ದೂರನ್ನು ಆಧರಿಸಿ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಶನಿವಾರ ಬೆಳಗ್ಗೆ ಕಾರನ್ನು ಪಾರ್ಕಿಂಗ್ ಲಾಟ್ನಿಂದ ತೆಗೆದುಕೊಂಡು ಹೋಗಲು ಬಂದಾಗ ಆರೋಪಿಯನ್ನು ಬಂಧಿಸಿದ್ದಾಗಿ ಡಿಸಿಪಿ ಶಿಲ್ಪವಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಯೂ ಕಳೆದ ವರ್ಷವೂ ಕೂಡ ಪ್ರತಿಷ್ಠಿತ ಪಬ್ ಒಂದರಿಂದ ಐಷಾರಾಮಿ ಕಾರನ್ನು ಕದ್ದು ಅದರ ನಂಬರ್ ಪ್ಲೇಟ್ ಬದಲಾಯಿಸಿ ತಿರುಗುತ್ತಿದ್ದ. ಆ ಕಾರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಸಂಬಂಧಪಟ್ಟವರನ್ನು ಹುಡುಕಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.