

ಬೆಂಗಳೂರು: ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಿಂದ ಸರಕುಗಳನ್ನು ಖರೀದಿಸದಂತೆ ಭಾಷಣ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆಯೂ ಬೆಂಗಳೂರಿನಲ್ಲಿ ನಡೆದಿರುವಂತೆ ಬಿಂಬಿಸಲಾಗಿತ್ತು.
ವಿಡಿಯೋದ ಅಸಲಿಯತ್ತಿನ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿರುವ ಕರ್ನಾಟಕ ಪೊಲೀಸರು ನಿಜಾಂಶವನ್ನು ಬಯಲು ಮಾಡಿದ್ದಾರೆ. ಅಸಲಿಗೆ ಆ ಘಟನೆಯೂ ನಡೆದಿರುವುದು ರಾಜಸ್ಥಾನದ ಬಾರ್ಮೆರ್ ಜಿಲ್ಲೆಯಲ್ಲಿ ಎಂದು ತಿಳಿದು ಬಂದಿದೆ.
2019ರ ಜೂನ್ ತಿಂಗಳಲ್ಲಿ ರಾಜಸ್ಥಾನದ ಬಾರ್ಮೆರ್ ಜಿಲ್ಲೆಯ ಬೊಜಾರಿಯಾ ಎಂಬ ಹಳ್ಳಿಯ ಬಳಿ ಇರುವ ಪೆಟ್ರೋಲ್ ಬಂಕ್ ಖಾಸಗಿ ಬಸ್ ಅಪಘಾತವಾಗಿತ್ತು. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಮೃತನ ಕುಟುಂಬಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವ್ಯಕ್ತಿಯೋರ್ವ ಭಾಷಣ ಮಾಡಿದ್ದ, ಈ ಸಂಬಂಧ ಬಾರ್ಮೆರ್ ಪೊಲೀಸರು ಈಗಾಗಲೇ ಆತನ ವಿರುದ್ಧ ಕ್ರಮವನ್ನು ಜರುಗಿಸಿದ್ದಾರೆ. ಫ್ಯಾಕ್ಟ್ಚೆಕ್ ವೇಳೆ ಬಾರ್ಮೆರ್ ಪೊಲೀಸರಿಂದ ಈ ಕುರಿತು ಟ್ವೀಟ್ ಮಾಡಲಾಗಿದ್ದು, ನಿಜಾಂಶ ಬಯಲಾಗಿದೆ.
ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಬೆಂಗಳೂರು ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪೊಲೀಸರು ಸೂಚನೆ ನೀಡಿದ್ಧಾರೆ.