

ಚೀನಾ: ಸಾಮಾನ್ಯವಾಗಿ ಅನೇಕರು ಒಂದೊಂದು ರೀತಿಯ ವಸ್ತುಗಳಿಗೆ ಬಹಳ ಹತ್ತಿರವಾಗಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ, ಆ ವಸ್ತು ಕಳೆದುಹೋದರೆ ತಮ್ಮಿಂದ ಬದುಕಲು ಸಾಧ್ಯವೇ ಇಲ್ಲ ಎನ್ನುವಂತ ಹೊಂದಿಕೊಂಡಿರುತ್ತಾರೆ. ಕೆಲವರು ಬೆಲೆ ಬಾಳುವ ವಾಚ್, ಸ್ಮಾರ್ಟ್ಫೋನ್, ವಸ್ತ್ರ, ಚಿನ್ನಾಭರಣ ಸೇರಿದಂತೆ ಮುಂತಾದ ವಸ್ತುಗಳೊಂದಿಗೆ ಮರೆಯಲಾಗದ ನೆನಪುಗಳನ್ನು ಉಳಿಸಿಕೊಂಡಿರುತ್ತಾರೆ. ಇಂತ ಹ ವಸ್ತುಗಳು ಕಳದುಹೋದರೆ, ಅದರಿಂದ ಉಂಟಾಗುವ ನೋವು ಅಪಾರ.
ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ತಾನು ಬಹಳ ಇಷ್ಟಪಡುವ ಗೊಂಬೆಯೊಂದನ್ನು ಮೆಟ್ರೋ ರೈಲಿನೊಳಗೆ ಕಳೆದುಕೊಂಡಿದ್ದಾನೆ. ಇದರಿಂದ ಭಾರೀ ಆಘಾತಕ್ಕೊಳಗಾದ ಆತ, ಮನುಷ್ಯನನ್ನೇ ಕಳೆದುಕೊಂಡಷ್ಟು ದುಃಖ ವ್ಯಕ್ತಪಡಿಸಿದ್ದಾನೆ. ಘಟನೆಯಿಂದ ಸ್ಥಳೀಯರು ಕೂಡ ಅಚ್ಚರಿಗೆ ಒಳಗಾಗಿದ್ದು, ತಮ್ಮ ಕೈಲಾದ ರೀತಿ ಸಹಾಯ ಮಾಡಲು ಮುಂದಾದರು. ತನ್ನ ಸೋಷಿಯಲ್ ಮೀಡಿಯಾದಲ್ಲಿ ಗೊಂಬೆಯ ಚಿತ್ರ ಪ್ರಕಟಿಸಿ, ಇದನ್ನು ಪತ್ತೆಹಚ್ಚಿದವರಿಗೆ 44,600 ರೂ.ಗಳನ್ನು ಬಹುಮಾನವಾಗಿ ನೀಡುವೆ ಹುಡುಕಿಕೊಡಿ ಎಂದು ಬರೆದುಕೊಂಡಿದ್ದ.
ನಾಪತ್ತೆ ಎಂಬ ಪೋಸ್ಟರ್ನಡಿ ಗೊಂಬೆಯ ಫೋಟೋ ಹಾಕಿ, ಬಹುಮಾನದ ಮೊತ್ತ ಕೂಡ ಘೋಷಿಸಿದ ವ್ಯಕ್ತಿಗೆ ಅಂತಿಮವಾಗಿ ಗೊಂಬೆ ಆತನ ಕೈಸೇರಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಮೆಟ್ರೋದ ಸಿಬ್ಬಂದಿಯೊಬ್ಬರು, ಗೊಂಬೆಯನ್ನು ಸುರಕ್ಷಿತವಾಗಿ ಎತ್ತಿಟ್ಟು, ವ್ಯಕ್ತಿಗೆ ಹಸ್ತಾಂತರಿಸಿದ್ದಾರೆ. ತನ್ನಿಷ್ಟದ ಗೊಂಬೆ ನೋಡುತ್ತಿದ್ದಂತೆ ಕಣ್ಣೀರಿಟ್ಟ ಆತ, ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾನೆ. "ಕೆಲವರಿಗೆ ಇದು ತಮಾಷೆ ಎನಿಸಬಹುದು. ಜನರಿಗೆ ಈ ಸಂಬಂಧ ಅರ್ಥವಾಗದಿರಬಹುದು. ಆದರೆ ನನ್ನ ಕೆಲಸ, ಪದವಿ ಅಥವಾ ಆಸ್ತಿಗಿಂತ ಬ್ರೆಡ್ (ಗೊಂಬೆ) ನನಗೆ ಬಹಳ ಮುಖ್ಯ" ಎಂದು ಸ್ಥಳೀಯ ಮಾಧ್ಯಮಕ್ಕೆ ಆತ ಪ್ರತಿಕ್ರಿಯಿಸಿದ್ದಾನೆ,(ಏಜೆನ್ಸೀಸ್).