

DurgaPuja : ದಸರಾ ಹಬ್ಬದ ನಿಮಿತ್ತ ದುರ್ಗಾ ಪೂಜೆಯಲ್ಲಿ ಸೊಸೆಯ ನೃತ್ಯ ಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾವನನ್ನು ಕುಟುಂಬ ಸದಸ್ಯರೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ಮೌಗಂಜ್ನಲ್ಲಿ ನಡೆದಿದೆ.
ರಾಮರತಿಯವರ ಸೊಸೆ ದುರ್ಗಾ ಪೂಜೆ ನಂತರ ಮಂಟಪದಲ್ಲಿ ನೃತ್ಯ ಮಾಡುವುದಾಗಿ ಯೋಜನೆ ಹಾಕಿದ್ದರು. ಆದರೆ ಆ ನೃತ್ಯಕ್ಕೆ ಇವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರ ಕುಟುಂಬದಲ್ಲಿ ವಾದ ವಿವಾದಕ್ಕೆ ಕಾರಣವಾಗಿದ್ದು, ಮನೆಯ ಸದಸ್ಯರನ್ನು ಕೆರಳಿಸುವಂತೆ ಮಾಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಈ ವಿಚಾರವಾಗಿ ಕೋಪಗೊಂಡ ಮೊಮ್ಮಗ ಸೋನು ಆತನ ಮೇಲೆ ಸಲಿಕೆಯಿಂದ ದಾಳಿ ನಡೆಸಿದ್ದಾನೆ. ಇದಾದ ನಂತರ ಮಗ ವೇದಪ್ರಕಾಶ್ ಹಾಗೂ ರಾಮರತಿ ಅವರ ಪತ್ನಿ ಮರದ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ. ಈ ಕುಟುಂಬಸ್ಥರ ಭೀಕರ ದಾಳಿಯಿಂದ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಗಲಾಟೆಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೌಗಂಜ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಐಪಿಸಿ ಸೆಕ್ಸನ್ 103(1) ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)