

ಉತ್ತರಪ್ರದೇಶ: ವಕೀಲನೊಬ್ಬ ತನ್ನ ಮನೆಯಲ್ಲಿ ವಾಸವಿದ್ದ ವೃದ್ಧ ಪೋಷಕರ ಮೇಲೆ ದಾಳಿ ಮಾಡಿದ್ದು, ಇಟ್ಟಿಗೆಯಿಂದ ಅವರನ್ನು ಹತ್ಯೆಗೈದ ಘಟನೆ ಉತ್ತರಪ್ರದೇಶದ ಫರೂಕಾಬಾದ್‌ನಲ್ಲಿ ವರದಿಯಾಗಿದೆ. ಆರೋಪಿಯನ್ನು ಮನೋಜ್ ಪಾಲ್ ಎಂದು ಗುರುತಿಸಲಾಗಿದ್ದು, ತನ್ನ ತಂದೆ ಓಂ ಪ್ರಕಾಶ್ (70) ಮತ್ತು ತಾಯಿ ಬಾಬ್ಲಿ (50) ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಕೊಲೆ ನಡೆದ ಮನೆಯ ನೆಲ ಮಹಡಿಯಲ್ಲಿ ಪಾಲ್ ತನ್ನ ಪತ್ನಿ ನಮ್ರತಾ ಜತೆ ವಾಸವಾಗಿದ್ದ. ಆತನ ಪೋಷಕರು ಮೊದಲ ಮಹಡಿಯಲ್ಲಿ ವಾಸವಾಗಿದ್ದರು. ಮೃತ ಓಂ ಪ್ರಕಾಶ್ ಅವರು ಒಂದು ವರ್ಷದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಮತ್ತು ಅನಾರೋಗ್ಯದ ಕಾರಣ ಕುಟುಂಬವು ಒತ್ತಡದಲ್ಲಿದೆ. ಆದರೆ, ಕೊಲೆಯ ಹಿಂದಿನ ಕಾರಣ ತಿಳಿದುಬಂದಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.
“ಬುಧವಾರ ರಾತ್ರಿ, ಪಾಲ್ ತನ್ನ ಹೆತ್ತವರೊಂದಿಗೆ ಮಲಗಲು ಹೋಗಿ, ಸ್ವಲ್ಪ ಸಮಯಕ್ಕೆ ವಾಪಾಸ್ ಆಗಿದ್ದಾನೆ. ನಂತರ ತನ್ನ ಪತ್ನಿ ನಮ್ರತಾಳನ್ನು ಕನೌಜ್ ಜಿಲ್ಲೆಯ ಆಕೆಯ ತಾಯಿಯ ಮನೆಗೆ ಏನೂ ಹೇಳದೆ ಕರೆದೊಯ್ದಿದ್ದಾನೆ. ತನ್ನ ತಂದೆ-ತಾಯಿ ಇಬ್ಬರನ್ನೂ ಕೊಂದು ಅಲ್ಲಿಂದ ಪರಾರಿಯಾಗಿರುವುದಾಗಿ ಆತ ಪತ್ನಿಗೆ ತಿಳಿಸಿದ್ದಾನೆ" ಎಂದು ಎಸ್ಪಿ ಹೇಳಿದ್ದಾರೆ.
ಘಟನೆ ಅರಿತ ಪಾಲ್ ಪತ್ನಿ, ಗಂಡನ ಕೃತ್ಯವನ್ನು ಪೊಲೀಸರಿಗೆ ವಿವರಿಸಿ, ಪತಿಯನ್ನು ಬಂಧಿಸುವಂತೆ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).