More

  ವಿಜ್ಞಾನ ಹಿರಿಯ ಲೇಖಕ ಡಾ.ಎಸ್.ಎನ್.ಹೆಗಡೆ, ಡಾ.ಎಂ.ಚಂದ್ರಕುಮಾರ್ ಅವರ ಕೃತಿಗಳನ್ನು ಬಿಡುಗಡೆ

  ಮೈಸೂರು: ಎಲ್ಲರಿಗೂ ಅರ್ಥವಾಗುವಂತೆ ಕೃತಿಗಳನ್ನು ರಚಿಸುವುದು ಸವಾಲಿನ ಕಾಯಕ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.
  ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಇನೋವೇಟಿವ್ ಸಂಸ್ಥೆಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ಹಿರಿಯ ಲೇಖಕ ಡಾ.ಎಸ್.ಎನ್.ಹೆಗಡೆ, ಡಾ.ಎಂ.ಚಂದ್ರಕುಮಾರ್ ಅವರ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
  ಪುಸ್ತಕಗಳು ಇಲ್ಲವೆಂದರೆ ಜ್ಞಾನವಿಲ್ಲ. ಜ್ಞಾನವಿಲ್ಲವೆಂದರೆ ಮಾನವನ ಜೀವನ ಸಾರ್ಥಕವಾಗುವುದಿಲ್ಲ. ಆದ್ದರಿಂದ ಪುಸ್ತಕಗಳು ಜ್ಞಾನ ವಾಹಕಗಳಾಗಿವೆ. ಎಲ್ಲರಿಗೂ ಅರ್ಥವಾಗುವಂತೆ ಕೃತಿಗಳನ್ನು ರಚಿಸುವುದು ಅಷ್ಟೇ ಮುಖ್ಯವಾಗಿದೆ. ಇದರಿಂದ ಮುಂದಿನ ಪೀಳಿಗೆಗೆ ಸಂಶೋಧನೆ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು.
  ಮನುಷ್ಯನಿಗೆ ಜ್ಞಾನ ವಿಕಸನವಾಗಲು ಆತನ ಸ್ಥಳೀಯ ಭಾಷೆ ಅಥವಾ ಮಾತೃಭಾಷೆಯಿಂದ ಮಾತ್ರ ಸಾಧ್ಯ. ಹಾಗಾಗಿ ಲೇಖಕರಾದ ಎಸ್.ಎನ್.ಹೆಗಡೆ ಅವರು ವಿಜ್ಞಾನ ವಿಷಯಗಳನ್ನು ಸಾಮಾನ್ಯರಿಗೂ ತಿಳಿಯುವಂತೆ ತಮ್ಮ ಬರಹದಲ್ಲಿ ಪ್ರಕಟಿಸಿದ್ದಾರೆ ಎಂದು ಪ್ರಶಂಸಿಸಿದರು.
  ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿದ್ದ ಸಮಯದಲ್ಲಿ ಪ್ರಸಾರಾಂಗದಿಂದ ಹಲವು ಕೃತಿಗಳು ಹೊರಬಂದವು. ಆದರೀಗ ಆ ಸಂಸ್ಥೆಗೆ ಸರಿಯಾದ ಅಧಿಕಾರಿ ಇಲ್ಲದ ಕಾರಣ ಕ್ಷೀಣಿಸುತ್ತಿದೆ. ದುರಾದೃಷ್ಟಾವಶಾತ್ ಮುಚ್ಚುವ ಸ್ಥಿತಿಗೆ ಬಂದಿರುವುದು ಬೇಸರ ತರಿಸಿದೆ ಎಂದರು.
  ಕೃತಿ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಅವರು, ಡಾ.ಎನ್.ಎಸ್. ಹೆಗಡೆ ಅವರು ತಮ್ಮ ಕೃತಿಗಳ ಮೂಲಕ ವಿಜ್ಞಾನ ವಿಚಾರಗಳನ್ನು ಸರಳವಾಗಿ ಓದುಗರಿಗೆ ತಲುಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  ಇನೋವೇಟಿವ್ ಸಂಸ್ಥೆ ಅಧ್ಯಕ್ಷ ಜಿ.ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ರಘುರಾಂ ವಾಜಪೇಯಿ, ಲೇಖಕರಾದ ಡಾ.ಎಸ್.ಎನ್. ಹೆಗಡೆ, ಡಾ.ಎಂ.ಚಂದ್ರಕುಮಾರ್, ಮಹಿಮಾ ಪ್ರಕಾಶನದ ಕೆ.ವಿ.ಶ್ರೀನಿವಾಸ್, ವಿದ್ವಾನ್ ಹೇರಂಬ ಭಟ್ ಇತರರು ಇದ್ದರು.
  1966-1977 ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ( ಸಂಪುಟ 4), 1978-1990 ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕೃತರು( ಸಂಪುಟ 5), ವ್ಯಾಯಾಮ ಶರೀರ ಕ್ರಿಯಾ ವಿಜ್ಞಾನದ ಮೂಲ ತತ್ವಗಳು, ಜೀವ ವೈವಿಧ್ಯ : ವನ್ಯ ಜೀವಿಗಳು ಮತ್ತು ಸಂರಕ್ಷಣೆ, ತಳಿ ವಿಜ್ಞಾನ ಮತ್ತು ತತ್ವಗಳು ಹಾಗೂ ಕಡಲ ತೀರದ ಅಕಶೇರುಕಗಳು ಪುಸ್ತಕಗಳು ಬಿಡುಗಡೆಗೊಂಡವು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts