

ತಮಿಳುನಾಡು: ಜೈಪುರ-ದೆಹಲಿ-ಚೆನ್ನೈ ಇಂಡಿಗೋ ವಿಮಾನದಲ್ಲಿ (Indigo Flight) ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯನ್ನು ಇದೀಗ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 9ರಂದು ಆರೋಪಿ ರಾಕೇಶ್ ಶರ್ಮಾ ಮತ್ತು ಮಹಿಳೆ ಜೈಪುರದಿಂದ ಚೆನ್ನೈಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಕಿಟಿಕಿಯ ಸೀಟಿನಲ್ಲಿದ್ದ ಮಹಿಳೆಯ ಹಿಂದಿದ್ದ ಆಸನದಲ್ಲಿಯೇ ಕುಳಿತ್ತಿದ್ದ ಆರೋಪಿ, ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದನ್ನು ಗಮನಿಸಿದ ಮಹಿಳೆ ತಕ್ಷಣವೇ ವ್ಯಕ್ತಿಯ ವರ್ತನೆಯ ಬಗ್ಗೆ ಮಹಿಳಾ ಕ್ಯಾಬಿನ್ ಸಿಬ್ಬಂದಿಗೆ ದೂರು ನೀಡಿದ್ದಾರೆ. ವಿಮಾನವು ಚೆನ್ನೈನಲ್ಲಿ ಇಳಿಯುತ್ತಿದ್ದಂತೆ ಪೊಲೀಸರು ದೂರಿನ ಆಧಾರದ ಮೇಲೆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರೋಪಿ ರಾಕೇಶ್ ಶರ್ಮಾ ಟೈಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಕೆಲಸ ಸಂಬಂಧಿತ ಉದ್ದೇಶಗಳಿಗಾಗಿ ಜೈಪುರಕ್ಕೆ ಪ್ರಯಾಣಿಸಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ಏರ್ಲೈನ್ ಸಂಸ್ಥೆ ಮಾತ್ರ ಇಲ್ಲಿಯವರೆಗೂ ಯಾವ ಹೇಳಿಕೆಯೂ ನೀಡಿಲ್ಲ,(ಏಜೆನ್ಸೀಸ್).