ರೀಲ್ಸ್​ ತಂದ ಸಂಕಷ್ಟ! ಪೊಲೀಸ್​ ಜೀಪ್​ ಮುಂದೆ ವಿಡಿಯೋ ಮಾಡಿದ ಯುವಕನ ಪಾಡು ಬೇಡ್ವೇ ಬೇಡ…

Untitled design - 2024-02-19T082923.170
Published on

ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಯುವಕರ ರೀಲ್ಸ್ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ನಿಂತು ಒಂದು ರೀಲ್ ವಿಡಿಯೋ ಮಾಡಿಕೊಂಡು, ತಕ್ಷಣವೇ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುವುದು ಇಂದಿನ ಯುವಜನತೆಯ ಗೀಳಾಗಿದೆ. ಪಬ್ಲಿಕ್​ ಪಾರ್ಕ್​, ರೈಲ್ವೇ ನಿಲ್ದಾಣ, ಜನದಟ್ಟಣೆಯಿರುವ ರಸ್ತೆಗಳಲ್ಲಿ ರೀಲ್ಸ್​ ಮಾಡುವ ಪ್ರವೃತ್ತಿ ಯಾಕೋ ದಿನೇ ದಿನೇ ಅಧಿಕವಾಗುತ್ತಲೇ ಇದೆ. ಅಂತಹದ್ದೇ ಪ್ರಕರಣವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಉತ್ತರಪ್ರದೇಶ ಗಾಜಿಯಾಬಾದ್‌ನಲ್ಲಿ ಯುವಕನೊಬ್ಬ ಪೊಲೀಸ್ ಜೀಪ್​ ಅನ್ನು ತನ್ನ ರೀಲ್ಸ್​ ಚಟಕ್ಕಾಗಿ ಬಳಸಿಕೊಂಡಿದ್ದು, ಕೇವಲ ವಾಹನ ಮುಂದೆ ನಿಲ್ಲದೆ, ಚಾಲಕನ ಸೀಟಿನಲ್ಲಿ ಕುಳಿತು ಜೋರಾಗಿ ಹಾಡು ಹಾಕಿ ಇನ್‌ಸ್ಟಾಗ್ರಾಮ್ ರೀಲ್ ವಿಡಿಯೋ ಮಾಡಿ ಇದೀಗ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆತನನ್ನು ಸದ್ಯ ಬಂಧನಕ್ಕೆ ಒಳಪಡಿಸಿದ್ದಾರೆ.

ಇಂದಿರಾಪುರಂ ರಸ್ತೆ ಸಂಚಾರ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದ ಪ್ರದೇಶದಲ್ಲಿ ಅಧಿಕಾರಿಗಳು, ತಮ್ಮ ಜೀಪ್​ನ ರಸ್ತೆಬದಿ ನಿಲ್ಲಿಸಿ ಹೋಗಿದ್ದರು. ಈ ವೇಳೆ ಮೊಯಿನ್ ಖಾನ್ ಎಂಬ ಯುವಕ, ಪೊಲೀಸ್ ವಾಹನ ಬಳಸಿ ವಿಡಿಯೋ ಮಾಡಿದ್ದಾನೆ. ಯುವಕ ವಾಹನದ ಚಾಲಕನ ಸೀಟಿನಿಂದ ಹೊರಬರುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ಅಧಿಕಾರಿಗಳ ಪ್ರಕಾರ, ಇಂದಿರಾಪುರಂನ ಕಣವಾಣಿ ಸೇತುವೆ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಪೊಲೀಸ್ ವಾಹನವನ್ನು ಗಮನಿಸಿದ ಯುವಕ ಅದನ್ನು ಬಳಸಿ ರೀಲ್ ಮಾಡಿದ್ದಾನೆ. ವಿಡಿಯೋ ವೈರಲ್ ಆದ ಬಗ್ಗೆ ಗಮನಹರಿಸಿ, ಇದೀಗ ಆತನನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net