

ನವದೆಹಲಿ: ಸಿಎಎ ಪರ-ವಿರೋಧಿ ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಸಂಘರ್ಷ ತೀವ್ರ ಹಿಂಸಾಚಾರಕ್ಕೆ ಇಳಿದಿತ್ತು. ಸದ್ಯ ಪರಿಸ್ಥಿತಿ ಸ್ವಲ್ಪ ನಿಯಂತ್ರಣದಲ್ಲಿ ಇದ್ದರೂ, ಕಳೆದ ಮೂರ್ನಾಲ್ಕು ದಿನಗಳಿಂದ ಈಶಾನ್ಯ ದೆಹಲಿ ಹಾಗೂ ಪೂರ್ವ ದೆಹಲಿಯ ಕೆಲ ಭಾಗಗಳು ಸಂಪೂರ್ಣ ರಕ್ತಸಿಕ್ತವಾಗಿದ್ದವು.
ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಲವು ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಸದ್ಯ ಮತ್ತೊಂದು ವಿಡಿಯೋ ಮೂಲಕ ದೆಹಲಿ ಹಿಂಸಾಚಾರದ ಕರಾಳತೆ ಬೆಳಕಿಗೆ ಬಂದಿದೆ.
ಐದು ಜನ ಯುವಕರು ಗಾಯಗೊಂಡು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಾರೆ. ಅವರು ರಾಷ್ಟ್ರಗೀತೆಯನ್ನು ಹಾಡುತ್ತಿರುತ್ತಾರೆ. ಅದರಲ್ಲಿ ಓರ್ವ ಯುವಕನಂತೂ ತೀವ್ರ ಗಾಯಗೊಂಡಿದ್ದ. ಈ ಯುವಕರ ಸುತ್ತಲೂ ಪೊಲೀಸರು ನಿಂತಿದ್ದಾರೆ. ಪೊಲೀಸರು ನೆಲದ ಮೇಲೆ ಬಿದ್ದು ಹೊರಳಾಡುತ್ತಿರುವ ಯುವಕರ ಬಳಿ ರಾಷ್ಟ್ರಗೀತೆಯನ್ನು ಇನ್ನೂ ಚೆನ್ನಾಗಿ ಹಾಡಿ ಎಂದು ಅವರ ಮುಖದ ಎದುರು ಲಾಠಿಯನ್ನೂ ತೋರಿಸುತ್ತಾರೆ. ಹೀಗೆ ಬಿದ್ದ ಯುವಕರಲ್ಲಿ ಓರ್ವ ತೀವ್ರ ಗಾಯಗೊಂಡು, ಉಸಿರಾಡಲು ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅಲ್ಲದೆ ಪೊಲೀಸರು ಅವರಿಗೆ ಹೊಡೆಯುವುದನ್ನು, ಯುವಕರು ರಾಷ್ಟ್ರಗೀತೆ ಹಾಡುತ್ತಿದ್ದರೆ ಅದನ್ನು ವಿಡಿಯೋ ಮಾಡಿಕೊಳ್ಳುವುದನ್ನೂ ನೋಡಬಹುದು.
ಹೀಗೆ ರಸ್ತೆ ಮೇಲೆ ಬಿದ್ದಿದ್ದ ಐದು ಮಂದಿ ಯುವಕರಲ್ಲಿ ಓರ್ವ ಮೃತಪಟ್ಟಿದ್ದಾಗಿ ವರದಿಯಾಗಿದೆ. ಮೃತ ಯುವಕನನ್ನು ಫೈಜಾನ್ (23) ಎಂದು ಗುರುತಿಸಲಾಗಿದೆ. ಈತ ಈಶಾನ್ಯ ದೆಹಲಿಯ ಕಾರ್ಡಂಪುರಿಯವನು. ಅತಿಹೆಚ್ಚು ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ಕಾರ್ಡಂಪುರಿ ಏರಿಯಾ ಕೂಡ ಒಂದು. ಫೈಜಾನ್ನನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಈ ವಿಡಿಯೋವನ್ನು ಆಲ್ಟ್ನ್ಯೂಸ್ ಫ್ಯಾಕ್ಟ್ಚೆಕ್ ಮೂಲಕ ಪರಿಶೀಲನೆ ಮಾಡಿದ್ದು, ಈಶಾನ್ಯ ದೆಹಲಿಯಲ್ಲೇ ಘಟನೆ ನಡೆದಿದ್ದು ಎಂದು ಸ್ಪಷ್ಟವಾಗಿದೆ.
ಫೈಜಾನ್ ಪಾಲಕರು ಮಗನನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ. ಪೊಲೀಸರು ಹೊಡೆದಿದ್ದರಿಂದ ಆತನ ಪೂರ್ತಿ ಮೈ ಕಪ್ಪುಬಣ್ಣಕ್ಕೆ ತಿರುಗಿತ್ತು ಎಂದು ಹೇಳಿದ್ದಾರೆ. (ಏಜೆನ್ಸೀಸ್)