

ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಎಚ್ಚರಿಕೆಯ ಹೊರತಾಗಿಯೂ ಜನ ಮೋಸ ಹೋಗುತ್ತಿರುವುದು ಮಾತ್ರ ಕಡಿಮೆಯಾಗಿಲ್ಲ.
ಇದೀಗ ಪ್ರಕರಣ ಒಂದರಲ್ಲಿ ವ್ಯಕ್ತಿಯೋರ್ವ ತನ್ನ ಸಹೋದರಿ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಸೈಬರ್ ವಂಚಕರು ಕಳವು ಮಾಡಿರುವ ಪ್ರಕರಣ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ವೃತ್ತಿಯಲ್ಲಿ ಫರ್ನಿಚರ್ ಉದ್ಯಮ ನಡೆಸುತ್ತಿರುವ 23 ವರ್ಷದ ಯುವಕನ ನಂಬರಿಗೆ ವಾಟ್ಸ್ಆ್ಯಪ್ ಮೂಲಕ ನೀವು ಐಫೋನ್ 14 ಪ್ರೋ ಮ್ಯಾಕ್ಸ್ ಗೆದ್ದಿದ್ದೀರಾ ಈ ಲಿಂಕ್ ಓಪನ್ ಮಾಡಿ ಎಂಬ ಮೆಸ್ಸೇಜ್ ಬಂದಿದೆ. ಕೂಡಲೇ ಲಿಂಕ್ ಓಪನ್ ಮಾಡಿ ಆನ್ಲೈನ್ ಫಾರ್ಮ್ ಒಂದನ್ನು ಭರ್ತಿ ಮಾಡಿ ನಮೂದಿಸಿದ್ದ ನಂಬರಿಗೆ ಕರೆ ಮಾಡಿದ್ಧಾನೆ.
ಬಳಿಕ ವಂಚಕ ನಿಮ್ಮ ಐಫೋನ್ ಈಗಾಗಲೇ ಡೆಲಿವರಗೆ ಸಿದ್ದವಾಗಿದ್ದು, ಕೆಲ ತೆರಿಗೆಗಳನ್ನು ಕಟ್ಟಬೇಕಾಗಿದೆ ಎಂದು ಯುವಕನಿಗೆ ಹೇಳಿದ್ಧಾನೆ. ವಂಚಕನ ಮಾತಿಗೆ ಮರುಳಾದ ಯುವಕ ಆತ ಹೇಳಿದಂತೆ ಹಣ ಸಂದಾಯ ಮಾಡುತ್ತ ಬಂದಿದ್ದಾನೆ. 34ಕ್ಕೂ ಅಧಿಕ ವಹಿವಾಟು ಬಳಿಕ ಎಚ್ಚೆತ್ತ ದುರುದಾರ ತಾನು ಮೋಸ ಹೋಗಿರುವುದನ್ನು ಅರಿತಿದ್ದಾನೆ.
ಕೂಡಲೇ ಆ ನಂಬರಿಗೆ ಮತ್ತೊಮ್ಮೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಎಂದು ಬಂದಿದೆ. ತನ್ನ ಸಹೋದರಿ ಮದುವೆಗೆ ಕೂಡಿಟ್ಟಿದ್ದ 4 ಲಕ್ಷ ರೂಪಾಯಿ ಹಣ ಕಳೆದುಕೊಂಡ ಬಗ್ಗೆ ಯುವಕ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾನೆ.