ಕೆಲವೇ ಸೆಕೆಂಡ್​ಗಳಲ್ಲಿ 45 ಲಕ್ಷ ರೂ. ಮಾಯ! ಸಿಬಿಐ ಅಧಿಕಾರಿ ಹೆಸರಿನಲ್ಲಿ ಸೈಬರ್ ವಂಚನೆ, ವ್ಯಕ್ತಿ ಕಂಗಾಲು | Cyber Crime

ವಿಜಯವಾಣಿ - 2025-01-26T173925.600
Published on

Cyber Crime: ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ತೀರ ಸಾಮಾನ್ಯ ಎನ್ನುವಂತಾಗಿದೆ. ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಎಲ್ಲವೂ ಸುರಕ್ಷಿತ, ಡಿಜಿಟಲ್​ ಪ್ರಪಂಚವೇ ದಿ ಬೆಸ್ಟ್​ ಎನ್ನುವ ಸಮಯದಲ್ಲಿ ಅದೇ ಡಿಜಿಟಲ್​ ವೇಗವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಖದೀಮರು, ಕೇವಲ ಒಂದು ಸಂದೇಶ ಅಥವಾ ದೂರವಾಣಿ ಕರೆಯಲ್ಲಿ ಲಕ್ಷ, ಲಕ್ಷ ಹಣ ಪೀಕುತ್ತಿರುವುದು ದುರಂತ. ದಿನೇ ದಿನೇ ಹೆಚ್ಚುತ್ತಿರುವ ಸೈಬರ್​ ವಂಚನೆ ಬಗ್ಗೆ ದಿನಪತ್ರಿಕೆಗಳಿಂದ ಹಿಡಿದು ಸುದ್ದಿವಾಹಿನಿಗಳು ಹಲವಾರು ಸುದ್ದಿಗಳನ್ನು ಬಿತ್ತರಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದೇ ವಿಪರ್ಯಾಸ.

ಸಿಬಿಐ ಅಧಿಕಾರಿಯಂತೆ ನಟಿಸಿ, ಮಾಜಿ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 45 ಲಕ್ಷ ರೂ.ಗಳನ್ನು ಲಪಟಾಯಿಸಿದ ವಂಚನೆ ಪ್ರಕರಣ ಈಗ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ. ವಂಚಕರು ಎರಡು ದಿನಗಳಲ್ಲಿ ಕುಳಿಕ್ಕಲ ಕಲ್ಲುಂಪುರತ್‌ನ ಕೆ. ಥಾಮಸ್ (83) ಎಂಬುವವರ ಕುಳಿಕ್ಕಲ ಫೆಡರಲ್ ಬ್ಯಾಂಕ್ ಖಾತೆಯಿಂದ ಲಕ್ಷಗಟ್ಟಲೇ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿರುವ ಹಣದ ಮೂಲವನ್ನು ಬಹಿರಂಗಪಡಿಸುವಂತೆ ಕೇಳಿದ ವಂಚಕರು, ಜ.20ರಂದು, ತಾವು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ಥಾಮಸ್‌ಗೆ ಕರೆ ಮಾಡಿದ್ದಾರೆ.

ಬ್ಯಾಂಕ್ ಖಾತೆಯಲ್ಲಿ ಠೇವಣಿ ವಿವರಗಳನ್ನು ಕೇಳಿದ ಬಳಿಕ ಹೆಚ್ಚಿನ ಭದ್ರತೆ ಒದಗಿಸುವುದಾಗಿ ಭರವಸೆ ಕೊಟ್ಟ ವಂಚಕru ವೃದ್ಧ ನೀಡಿದ ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆಗೆ ಹಣವನ್ನು ವರ್ಗಾಯಿಸುವುದಾಗಿ ಹೇಳಿ, ಕ್ಷಣಮಾತ್ರದಲ್ಲಿ ಸಂಪೂರ್ಣ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಥಾಮಸ್, ತಕ್ಷಣವೇ ಕೇರಳದ ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದಾರೆ. ಪತ್ನಿ ಮರಣದ ನಂತರ ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ಥಾಮಸ್​ ಪ್ರಸ್ತುತ ವಿದೇಶದಲ್ಲಿದ್ದಾರೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net