ಹೆಂಡತಿ ಜತೆ ಜಗಳಕ್ಕೆ ಬೇಸತ್ತು 26 ಲಕ್ಷ ರೂಪಾಯಿಯೊಂದಿಗೆ ಗೋವಾಗೆ ಹೊರಟರೂ ಗ್ರಹಚಾರ ಕೆಟ್ಟಿತ್ತು!

Car with Cash
Published on

ಬೆಳಗಾವಿ: ಹೆಂಡತಿ ಜತೆ ಜಗಳವಾಗಿದ್ದಕ್ಕೆ ಬೇಸರಗೊಂಡು ಲಕ್ಷಾಂತರ ರೂಪಾಯಿ ಹಣದೊಂದಿಗೆ ಗೋವಾ ಕ್ಯಾಸಿನೋಗೆ ಹೊರಟರೂ ಈತನ ಗ್ರಹಚಾರ ಕೆಟ್ಟಿತ್ತು. ಗೋವಾಗೆ ಹೋಗಿ ನಿರಾಳವಾಗಬೇಕು ಎಂದುಕೊಂಡಿದ್ದವ ಮಾರ್ಗಮಧ್ಯೆಯೇ ತಲೆಕೆಡಿಸಿಕೊಳ್ಳುವಂತಾಗಿದೆ.

ಮುಂಬೈನ ಗುತ್ತಿಗೆದಾರ ಬಾದಲ್ ನರ್ಬಾಜೆ ಎಂಬಾತನೇ ಇಂಥದ್ದೊಂದು ಫಜೀತಿಗೆ ಒಳಗಾಗಿದ್ದು. ಈತ ಪತ್ನಿ ಜತೆ ಜಗಳವಾಗಿದ್ದಕ್ಕೆ ತೀವ್ರ ಬೇಸರಗೊಂಡು 26 ಲಕ್ಷ ರೂ. ತೆಗೆದುಕೊಂಡು ಗೋವಾ ಕ್ಯಾಸಿನೋಗೆ ಹೊರಟಿದ್ದ. ಆದರೆ ಮುಂಬೈನಿಂದ ಗೋವಾಗೆ ಹೊರಟಿದ್ದ ಈತ ಮಾರ್ಗಮಧ್ಯೆ ಸಿಕ್ಕಿಬಿದ್ದಿದ್ದಾನೆ.

ಬೆಳಗಾವಿಯ ಕರ್ನಾಟಕ ಚೌಕ್ ಸಮೀಪದ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಚೆಕ್​ ಮಾಡುವಾಗ ಕಾರಿನಲ್ಲಿ 26 ಲಕ್ಷ ನಗದು ಇರುವುದು ಗೊತ್ತಾಗಿದೆ. ಚುನಾವಣೆ ನೀತಿಸಂಹಿತೆ ಇರುವುದರಿಂದ ಹಣದ ಬಗ್ಗೆ ದಾಖಲೆ ಕೇಳಿದ್ದಾರೆ. ಆದರೆ ಯಾವುದೇ ದಾಖಲೆ ಜೊತೆಗಿರದ್ದರಿಂದ ಈತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವಂತಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net