ರೀಲ್ಸ್​ ಮಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಪತ್ನಿ: ಸಿಟ್ಟಿಗೆದ್ದ ಗಂಡನಿಂದ ನಡೆಯಿತು ಘೋರ ಕೃತ್ಯ

Reels
Published on

ಚೆನ್ನೈ: ರೀಲ್ಸ್​ ಮಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಪತ್ನಿಯನ್ನು ಪತಿರಾಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್​ ಜಿಲ್ಲೆಯ ಭಾನುವಾರ ರಾತ್ರಿ ನಡೆದಿದೆ.

ಚಿತ್ರಾ ಕೊಲೆಯಾದ ದುರ್ದೈವಿ. ಅಮೃತಲಿಂಗಂ (38) ಬಂಧಿತ ಪತಿ. ಈತ ದಿಂಡಿಗಲ್​ ಮೂಲದವನು. ದಂಪತಿ ತಿರುಪ್ಪೂರ್​ನ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದರು. ತೆನ್ನಂಪಾಳ್ಯಂನ ತರಕಾರಿ ಮಾರುಕಟ್ಟೆಯಲ್ಲಿ ಅಮೃತಲಿಂಗಂ ದಿನಗೂಲಿ ನೌಕರನಾಗಿದ್ದ. ಚಿತ್ರಾ ಗಾರ್ಮೆಂಟ್​ ಕಾರ್ಖಾನೆಯ ಉದ್ಯೋಗಿಯಾಗಿದ್ದಳು. ಈ ಮೊದಲು ಟಿಕ್​ಟಾಕ್​ ವಿಡಿಯೋಗಳನ್ನು ಮಾಡುತ್ತಿದ್ದ ಚಿತ್ರಾ, ಟಿಕ್​ಟಾಕ್​ ಬ್ಯಾನ್​ ಆದ ಬಳಿಕ ಇನ್​ಸ್ಟಾಗ್ರಾಂ ರೀಲ್ಸ್​ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಳು. ಅಲ್ಲದೆ, ಹೆಚ್ಚಾಗಿ ರೀಲ್ಸ್​ನಲ್ಲೇ ಚಿತ್ರಾ ಸಮಯ ಕಳೆಯುತ್ತಿದ್ದಳು.

ಇನ್​ಸ್ಟಾಗ್ರಾಂನಲ್ಲಿ 33 ಸಾವಿರ ಫಾಲೋವರ್ಸ್​ ಹೊಂದಿದ್ದಳು. ಫಾಲೋವರ್ಸ್ ಹೆಚ್ಚಾಗುತ್ತಾ ಆಕೆಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಹುಟ್ಟಿಕೊಂಡಿತು. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರ ನಡುವೆ ಚಿತ್ರಾ, ಗಂಡನೊಂದಿಗೆ ಮತ್ತೆ ಜಗಳವಾಡಿಕೊಂಡು ಎರಡು ತಿಂಗಳ ಹಿಂದೆ ತವರಿಗೆ ಹೋಗಿದ್ದಳು. ಬಳಿಕ ಮಗಳ ಮದುವೆಗೆಂದು ಮನೆಗೆ ಮರಳಿದ್ದಳು.

ಮದುವೆ ಮುಗಿದ ಬಳಿಕ ಮತ್ತೆ ಚೆನ್ನೈಗೆ ತೆರಳಲು ಚಿತ್ರಾ ಮುಂದಾಗಿದ್ದಳು. ಆದರೆ, ಆಕೆ ಹೋಗುವುದನ್ನು ಅಮೃತಲಿಂಗಂ ತಡೆದನು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ತಾಳ್ಮೆ ಕಳೆದುಕೊಂಡ ಅಮೃತಲಿಂಗಂ ಶಾಲು ತೆಗೆದುಕೊಂಡು ಚಿತ್ರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಚಿತ್ರಾ ಮೂರ್ಛೆ ಹೋದ ಕೂಡಲೇ ಅಮೃತಲಿಂಗಂ ಮನೆ ಬಿಟ್ಟು ಹೋಗಿದ್ದ. ತನ್ನ ಕೃತ್ಯದ ಬಗ್ಗೆ ಮಗಳಿಗೆ ಮಾಹಿತಿ ನೀಡಿದಾಗ, ಮಗಳು ಮನೆಗೆ ಬಂದು ಪರಿಶೀಲಿಸಿದ್ದಾಳೆ. ಅಷ್ಟರಲ್ಲಾಗಲೇ ಚಿತ್ರಾ ಮೃತಪಟ್ಟಿದ್ದಳು. ಬಳಿಕ ಮಗಳು ಇದನ್ನು ಪೊಲೀಸರಿಗೆ ತಿಳಿಸಿದ್ದು, ಇದೀಗ ಪತಿಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net