ಪತ್ನಿ ಹತ್ಯೆಗೈದು ಆತ್ಮಹತ್ಯೆ ಕತೆ ಕಟ್ಟಿದ!

Crime Murder
Published on

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿ ಕೊಂಡು ಪತ್ನಿಯ ಕತ್ತು ಹಿಸುಕಿ ಹತ್ಯೆಗೈದು ಆತ್ಮಹತ್ಯೆ ಎಂದು ಕತೆ ಕಟ್ಟಿದ ಪ್ರಕರಣ ಬೆಳಕಿಗೆ ಬಂದಿದೆ.

ಗಾರ್ವೆಬಾವಿಪಾಳ್ಯದ ಸುಬ್ಬಯ್ಯಗಾರ್ಡನ್ ನಿವಾಸಿ ಅನುಷಾ (26) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆಕೆಯ ಪತಿ ಶಿವಶಂಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿ ರುವ ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಶಿವಶಂಕರ್ ಹಾಗೂ ಅನುಷಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಸುಬ್ಬಯ್ಯ ಗಾರ್ಡನ್​ನಲ್ಲಿ ವಾಸಿಸುತ್ತಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಜ.2ರ ಬೆಳಗಿನ ಜಾವ ದಂಪತಿ ನಡುವೆ ಜಗಳವಾಗಿ ಶಿವಶಂಕರ್ ಆಕ್ರೋಶಗೊಂಡು ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ಕುಟುಂಬಸ್ಥರಿಗೆ ಕರೆ ಮಾಡಿ, ‘ಪತ್ನಿ ನೇಣು ಹಾಕಿಕೊಂಡಿದ್ದಳು. ಜೀವ ಇದ್ದ ಆಕೆಯನ್ನು ಮನೆ ಸಮೀಪದ ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ’ ಎಂದು ತಿಳಿಸಿದ್ದ.

ಈ ಕುರಿತು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಮೃತದೇಹದ ಕುತ್ತಿಗೆ ಭಾಗದಲ್ಲಿ ಗುರುತು ಪತ್ತೆಯಾಗಿತ್ತು. ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದನ್ನು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಡಿಸಿದ್ದಾರೆ. ತನ್ನ ಕೃತ್ಯ ಬಯಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net