ಕಬ್ಬಿನ ಗದ್ದೆಯಲ್ಲಿ ದಂಪತಿಯ ಶವ ಪತ್ತೆ; ಹೆಂಡತಿಯ ಕತ್ತು ಸೀಳಿ ಕೊಲೆ...

crime
Published on

ಉತ್ತರಪ್ರದೇಶ: ಗಂಡ-ಹೆಂಡತಿ ಇಬ್ಬರ ಶವವೂ ಕಬ್ಬಿನ ಗದ್ದೆಯೊಂದರಲ್ಲಿ ಪತ್ತೆಯಾಗಿದ್ದು, ಪತ್ನಿಯ ಕತ್ತನ್ನು ಸೀಳಿ ಕೊಲೆ ಮಾಡಲಾಗಿದೆ. ಮತ್ತೊಂದೆಡೆ ವಿಷ ಕುಡಿದು ಸಾವಿಗೀಡಾಗಿದ್ದ ಪತಿಯ ಶವವೂ ಅಲ್ಲೇ ಕಂಡು ಬಂದಿದೆ. ಉತ್ತರಪ್ರದೇಶದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಉತ್ತರಪ್ರದೇಶದ ಬರೇಲಿಯ ಸೀಶ್​ಘರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸೋಹನ್​ಲಾಲ್​ (30) ಹಾಗೂ ಆತನ ಪತ್ನಿ ಕೌಶಲ್ಯದೇವಿ (30) ಅವರ ಶವ ಕಬ್ಬಿನ ಗದ್ದೆಯೊಂದರಲ್ಲಿ ಪತ್ತೆಯಾಗಿದೆ ಎಂದು ಎಸ್​ಪಿ ರಾಜ್​ಕುಮಾರ್ ಅಗರ್​ವಾಲ್ ತಿಳಿಸಿದ್ದಾರೆ.

ಕೌಶಲ್ಯ ಕತ್ತನ್ನು ಸೀಳಿ ಕೊಲೆ ಮಾಡಲಾಗಿದ್ದು, ಪತಿಯೇ ಕೊಲೆ ಮಾಡಿ ಬಳಿಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ದಂಪತಿ ಇಂದು ಜಾನುವಾರಿಗೆ ಮೇವು ತರಲೆಂದು ಜೊತೆಯಾಗಿ ಹೋಗಿದ್ದು, ಆ ಬಳಿಕ ಈ ಪ್ರಕರಣ ನಡೆದಿದೆ. ಸಾವಿಗೀಡಾಗಿರುವ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಇಬ್ಬರ ಶವವನ್ನೂ ಮರಣೋತ್ತರ ಪರೀಕ್ಷೆಗೆ ಕಳಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net