

ಆಂಧ್ರಪ್ರದೇಶ: ಪ್ರೀತಿ ಹೆಸರಿನಲ್ಲಿ ವಂಚಿಸುವವರ ಸಂಖ್ಯೆಗೇನು ಕಡಿಮೆಯಿಲ್ಲ. ಮಾಡುವುದು ಹುಸಿ ಪ್ರೀತಿಯಾದರೂ, ನೀನೇ ಎಲ್ಲಾ, ನಿನ್ನ ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳುತ್ತಲೇ ದ್ರೋಹ ಬಗಿಯುತ್ತಾರೆ. ಇದು ಒಂದು ರೀತಿಯಾದರೆ, ಇನ್ನು ಕೆಲವರು ಪ್ರೀತಿಸುವ ಮನಸ್ಸಿಲ್ಲ, ಉದ್ದೇಶವಿಲ್ಲ ಎಂದರೂ ಬೆಂಬಿಡದೆ ನನ್ನನ್ನು ಪ್ರೀತಿಸು (Love) ಎಂದು ಹಿಂಸಿಸುತ್ತಾರೆ. ಕೆಲವೊಮ್ಮೆ ಈ ಹುಚ್ಚುತನ ದುರಂತಕ್ಕೂ ಕೂಡ ಕಾರಣವಾಗುತ್ತದೆ. ಅದು ಹುಡುಗಿಯೇ ಇರಲಿ, ಹುಡುಗನೇ ಆಗಲಿ, ಲವ್ ಹೆಸರಿನಲ್ಲಿ ಮಾನಸಿಕ ಹಿಂಸೆ ಅತಿಯಾದ್ರೆ ಕೊಲೆ ಅಥವಾ ಆತ್ಮಹತ್ಯೆಯೂ ಸಂಭವಿಸಬಹುದು. ಸದ್ಯ ಈ ಘಟನೆ ಕೂಡ ಅದನ್ನೇ ಒತ್ತಿ ಹೇಳಿದೆ.
ಪ್ರೀತಿಯ ಹೆಸರಿನಲ್ಲಿ ಮಾನಸಿಕ ಹಿಂಸೆ ನೀಡುತ್ತಿದ್ದ ಯುವಕನಿಂದ ಬೇಸತ್ತು ತನ್ನ ಜೀವನವನ್ನೇ ಕೊನೆಗೊಳಿಸಿದ ಶಿಕ್ಷಕಿ ಆಂಧ್ರಪ್ರದೇಶದ ವಿಶಾಪಟ್ಟಣದ ನಿವಾಸಿ ಎಂದು ವರದಿಯಾಗಿದೆ. ಅಸಲಿಗೆ ಆಕೆ ಪೊಲೀಸ್ ಠಾಣೆ ಮತ್ತು ಕಾನೂನುಗಳು ಇದ್ದರೂ ಸಹ ಆತ್ಮಹತ್ಯೆ ನಿರ್ಧಾರ ಕೈಗೊಳ್ಳಲು ಕಾರಣವೇನು? ಅಸಲಿಗೆ ಅಲ್ಲಿ ನಡೆದಿದ್ದೇನು ಎಂಬುದರ ವಿವರ ಹೀಗಿದೆ. ಉತ್ತಮ ಭವಿಷ್ಯವನ್ನು ಹೊಂದಿದ್ದ ಭೀಮಿಲಿಯ ಕಹಿಯಾಳದ ಯುವ ಶಿಕ್ಷಕಿಯನ್ನು ರಾಶಿ ಎಂದು ಗುರುತಿಸಲಾಗಿದೆ. ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆಯ ಮೇಲೆ ಕಣ್ಣಾಕಿದ ಅದೇ ಗ್ರಾಮದಲ್ಲಿ ವಾಸವಾಗಿದ್ದ ಪಿಲ್ಲಿ ರಾಜು ಎಂಬ ಯುವಕ, ರಾಶಿಗೆ ಪ್ರೀತಿಯ ಹೆಸರಲ್ಲಿ ಕಿರುಕುಳ ನೀಡಿದ್ದಾನೆ.
ಕೆಲ ದಿನಗಳಿಂದ ಆಕೆಯನ್ನು ಹಿಂಬಾಲಿಸಿ ತೊಂದರೆ ಕೊಡುತ್ತಿದ್ದ ಆರೋಪಿ ಪಿಲ್ಲಿ, ಆಕೆಗೆ ತನ್ನನ್ನು ಪ್ರೀತಿಸು ಎಂದು ದಿನನಿತ್ಯ ಹಿಂಸೆ ನೀಡಿದ್ದಾನೆ. ಬೆಳಗ್ಗೆ ಆದರೆ ಸಾಕು ಯುವತಿ ಶಾಲೆಗೆ ಹೋಗುವಾಗ ಹಾಗೂ ಮನೆಗೆ ಹಿಂತಿರುಗುವಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗ್ತಿದ್ದ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಶಿಕ್ಷಕಿಗೆ ಪೀಡಿಸುತ್ತಿದ್ದ. ಅಂತಿಮವಾಗಿ ಈತನ ಹಿಂಸೆ ತಾಳಲಾರದ ಯುವತಿ, ಮನೆಯಲ್ಲಿ ಯಾರಿಗೂ ಹೇಳಿಕೊಳ್ಳದೆ, ಕೀಟನಾಶಕ ಸೇವಿಸಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದ ಕುಟುಂಬಸ್ಥರು ತಕ್ಷಣವೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರಾಶಿಯ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ರಾಶಿ ಸಾವಿನಿಂದ ಕಂಗಾಲಾದ ಹೆತ್ತವರು, ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಪೊಲೀಸರ ಬಳಿ ಕಣ್ಣೀರಿಟ್ಟಿದ್ದಾರೆ. ತಮ್ಮ ಪುತ್ರಿಯ ಸಾವಿಗೆ ಕಾರಣನಾದ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ, ಆತನನ್ನು ಅರೆಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).