

Dog tooth : ವ್ಯಕ್ತಿಯೊಬ್ಬನ ದೇಹದಿಂದ ಸುಮಾರು 25 ವರ್ಷಗಳ ಹಿಂದೆ ಕಚ್ಚಿದ್ದ ನಾಯಿಯ ಹಲ್ಲನ್ನು ತೆಗೆದು ಹಾಕಿರುವ ಅಪರೂಪದ ಪ್ರಕರಣ ಕೇರಳದ ಚೇರ್ತಾಲ ತಾಲೂಕು ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ತಣ್ಣೀರ್ಮುಕ್ಕಂ ಕುಟ್ಟಿಕಲ್ ವೈಶಾಖ್ (36) ಎಂಬುವರ ಮೊಣಕೈಯಿಂದ ನಾಯಿಯ ಹಲ್ಲನ್ನು ತೆಗೆಯಲಾಗಿದೆ. ಮೊಣಕೈನಲ್ಲಿ ತೀವ್ರ ನೋವು ಮತ್ತು ಗಡ್ಡೆ ಕಾಣಿಸಿಕೊಂಡ ನಂತರ ವೈಶಾಖ್ ಅವರು ಆಸ್ಪತ್ರೆಗೆ ದಾಖಲಾದರು. ಸರ್ಜರಿ ನಡೆದ ಬಳಿಕ 25 ವರ್ಷಗಳ ಹಿಂದಿನ ರಹಸ್ಯ ಬಯಲಾಗಿದೆ.
ಅದೇನೆಂದರೆ, 25 ವರ್ಷಗಳ ಹಿಂದೆ ವೈಶಾಖ್ಗೆ ನಾಯಿ ಕಚ್ಚಿತ್ತು. ಈ ವೇಳೆ ಗಾಯ ಒಣಗಿ ಹೋಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮುಂದಾಗಿರಲಿಲ್ಲ. ಆದರೆ, ವರ್ಷಗಳ ನಂತರ, ಅವನ ಮೊಣಕೈಯಲ್ಲಿ ಒಂದು ಗಡ್ಡೆ ಕಾಣಿಸಿಕೊಂಡಿತು. ಹಲವೆಡೆ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ವೈಶಾಖ್ ಅವರು ಕಳೆದ ದಿನ ಚೇರ್ತಲ ತಾಲೂಕು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಡಾ.ಮಹಮ್ಮದ್ ಮುನೀರ್ ಅವರನ್ನು ಸಂಪರ್ಕಿಸಿದರು.
ಪರೀಕ್ಷೆ ನಡೆಸಿದಾಗ ಮೊಣಕೈಯಲ್ಲಿ ಯಾವುದೋ ಒಂದು ವಸ್ತು ಇರುವುದು ಪತ್ತೆಯಾಗಿದೆ. ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರ ತೆಗೆದ ನಂತರವೇ ಅದು ನಾಯಿಯ ಹಲ್ಲು ಎಂದು ತಿಳಿದುಬಂದಿದೆ. ಈ ಬಗ್ಗೆ ವೈದ್ಯರು ವೈಶಾಖ್ ಅವರನ್ನು ಕೇಳಿದಾಗ, 25 ವರ್ಷಗಳ ಹಿಂದೆ ನಾಯಿ ಕಚ್ಚಿದೆ ಎಂದು ಹೇಳಿದರು. ಸದ್ಯ ವೈಶಾಖ್ ಆರೋಗ್ಯ ಚೆನ್ನಾಗಿದೆ. (ಏಜೆನ್ಸೀಸ್)