ಗೃಹ ಪ್ರವೇಶದ ದಿನ ಹುಂಜ ಬಲಿ ಕೊಡಲು ಮೂರನೇ ಮಹಡಿಗೆ ಹೋದ ವ್ಯಕ್ತಿ ದುರಂತ ಸಾವು!

Rooster
Published on

ಚೆನ್ನೈ: ಹೊಸದಾಗಿ ನಿರ್ಮಾಣ ಮಾಡಿದ ಮನೆಯನ್ನು ಪ್ರವೇಶಿಸುವ ಮುನ್ನ ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳದಿರಲಿ ಎಂದು ಹುಂಜವನ್ನು ಬಲಿ ಕೊಡಲು ಹೋದ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು 70 ವರ್ಷದ ಕಾರ್ಮಿಕ ರಾಜೇಂದ್ರನ್​ ಎಂದು ಗುರುತಿಸಲಾಗಿದೆ. ಪಲ್ಲವರಂ ಬಳಿಯ ಪೊಜಿಚಲೂರ್ ಪ್ರದೇಶದಲ್ಲಿ ಟಿ. ಲೋಕೇಶ್​ ಎಂಬುವರು ಹೊಸ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಪೂಜಾ ವಿಧಾನಗಳನ್ನು ನಡೆಸಿಕೊಡಲು ರಾಜೇಂದ್ರನ್​ ಎಂಬುವರನ್ನು ಸಹಾಯಕರನ್ನಾಗಿ ನೇಮಿಸಿಕೊಂಡಿದ್ದರು.

ಪೂಜೆ ನೆರವೇರಿಸಿ ರಾಜೇಂದ್ರನ್​ ವಾಪಸ್‌ ಬಾರದೆ ಇದ್ದಾಗ, ಲೋಕೇಶ್‌ ಅವರನ್ನು ಹುಡುಕಿಕೊಂಡು ಹೋದರು. ಈ ವೇಳೆ ಕಟ್ಟಡಕ್ಕೆ ಲಿಫ್ಟ್‌ ಅಳವಡಿಸಲು ತೋಡಿದ್ದ ಗುಂಡಿಯಲ್ಲಿ ರಕ್ತದ ಮಡುವಿನಲ್ಲಿ ರಾಜೇಂದ್ರನ್​ ಬಿದ್ದಿರುವುದನ್ನು ಕಂಡು ದಿಗ್ಭ್ರಾಂತರಾದರು. ಹುಂಜವನ್ನು ಬಲಿ ಕೊಡಲು ಮೂರನೇ ಮಹಡಿಗೆ ಹೋದ ಸಂದರ್ಭದಲ್ಲಿ ಅಲ್ಲಿಂದ ಹಳ್ಳಕ್ಕೆ ಬಿದ್ದು ರಾಜೇಂದ್ರನ್​ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಹುಂಜ ಬದುಕುಳಿದಿದೆ. ರಾಜೇಂದ್ರನ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net