

ನವದೆಹಲಿ: ದೂರದ ಉತ್ತರ ಪ್ರದೇಶದಲ್ಲಿನ 19 ವರ್ಷದ ಯುವತಿಯೊಬ್ಬಳು ಕಾಣೆಯಾಗಿರುವ ಪ್ರಕರಣ ಕರ್ನಾಟಕದ ವರೆಗೂ ಸಂಪರ್ಕ ಪಡೆದಿದ್ದು, ಇಲ್ಲಿನ ಯುವಕನೊಬ್ಬನ ವಿರುದ್ಧ ಅಪಹರಣ ಹಾಗೂ ಮತಾಂತರ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿನ ಯುವತಿ ಕಾಲೇಜಿಗೆ ಹೋದವಳು ಮರಳದ ಕಾರಣ ಆಕೆಯ ತಂದೆ ಜ. 5ರಂದು ಅಲ್ಲಿನ ಚಿಲುವತಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿ ನೀರಜ್ ಕುಮಾರ್ ರೈ, ಮೂವರು ಪೊಲೀಸರನ್ನು ತನಿಖೆಗೆ ನಿಯೋಜಿಸಿದ್ದರು. ತನಿಖಾ ತಂಡ ಯುವತಿಯ ಮೊಬೈಲ್ ಫೋನ್ ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ ಒಂದು ನಂಬರ್ಗೆ ತುಂಬ ಕರೆ ಹೋಗಿರುವುದು ಕಂಡುಬಂದಿತ್ತು. ಆ ನಂಬರನ್ನು ಪರಿಶೀಲಿಸಿದಾಗ ಅದು ಕರ್ನಾಟಕದ ಮೆಹಬೂಬ್ ಎಂಬವನ ಹೆಸರಲ್ಲಿ ಇರುವುದಾಗಿ ತಿಳಿದು ಬಂದಿದೆ.
ತನಿಖೆಯ ಬೆಳವಣಿಗೆಯಲ್ಲಿ ಕಂಡುಬಂದ ಅಂಶಗಳ ಪ್ರಕಾರ, ಯುವತಿಯ ತಂದೆ ಬಳಿಕ ಅಪಹರಣ ಹಾಗೂ ಮತಾಂತರ ಪ್ರಕರಣ ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮೂವರು ಪೊಲೀಸರ ತಂಡ ಯುವತಿ ಹಾಗೂ ಆರೋಪಿಯ ಪತ್ತೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಕಾಣೆಯಾದ ಯುವತಿ ನಿವೃತ್ತ ಸೈನಿಕರೊಬ್ಬರ ಪುತ್ರಿಯಾಗಿದ್ದು, ಸೋಷಿಯಲ್ ಮೀಡಿಯಾ ಮೂಲಕ ಆರೋಪಿ ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ನಾಪತ್ತೆಯಾಗಿರುವ ಯುವತಿ ಹಾಗೂ ಆರೋಪಿ ಇಬ್ಬರೂ ಸಿಕ್ಕ ಬಳಿಕ ವಾಸ್ತವಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)