ಬೊಗಳಿತೆಂದು ನಾಯಿಯ ಕೊಲ್ಲಲು ಹೋದವ ತಾನೇ ಶವವಾದ!

dog
Published on

ಪಟನಾ: ನೆರೆಮನೆಯ ನಾಯಿಯ ನಿರಂತರ ಬೊಗಳುವಿಕೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಅದನ್ನು ಕೊಲ್ಲಲು ಮೂರು ಸುತ್ತು ಗುಂಡು ಹಾರಿಸಿದ. ಆದರೆ, ನಾಯಿ ಸಾಯದೆ, 10 ವರ್ಷದ ಬಾಲಕಿಯ ಕೈಗೆ ತಗುಲಿ ಗಾಯವಾಯಿತು.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಗುಂಡು ಹಾರಿಸಿದ ವ್ಯಕ್ತಿಯನ್ನು ಹಿಡಿದು ಮನಸೋಇಚ್ಛೆ ಥಳಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬಿಹಾರದ ರೊಹಟಾಸ್​ ಜಿಲ್ಲೆಯ ಬೇಲದಿ ಎಂಬ ಗ್ರಾಮದ ನಿವಾಸಿ ಗೋಪಾಲ್​ ರಾಂ (55) ಮೃತಪಟ್ಟವ. ಪಕ್ಕದ ಮನೆಯ ಸಾಕು ನಾಯಿ ನಿರಂತರವಾಗಿ ಬೊಗಳುತ್ತಿತ್ತು ಎಂದು ಬೇಸತ್ತು ಈತ ಆ ನಾಯಿಯನ್ನು ಕೊಲ್ಲಲು ಮುಂದಾಗಿದ್ದ ಎನ್ನಲಾಗಿದೆ.

ಈತ ಮೂರು ಸುತ್ತು ಗುಂಡು ಹಾರಿಸಿದ್ದು, ಈತ ಸಿಡಿಸಿದ ಮೂರನೇ ಗುಂಡು ನಾಯಿಯ ಮಾಲೀಕ ವಿನೋದ್​ ರಾಮ್​ನ ಪುತ್ರಿ ಭೂಮಿಕಾ ಕುಮಾರಿಯ (10) ಕೈಗೆ ತಗುಲಿತು. ಗಾಯಗೊಂಡ ಆಕೆಯನ್ನು ತಕ್ಷಣವೇ ಸಸಾರಾಂ ಸಾದರ್​ ಹಾಸ್ಪಿಟಲ್​ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ದರಿಹಾತ್​ ಪೊಲೀಸ್​ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಪೊಲೀಸರಿಗೆ ಹೇಳಿಕೆ ನೀಡಿರುವ ವಿನೋದ್​ ರಾಮ್​, ಆತನ ನನ್ನ ಪುತ್ರಿಯ ಮೇಲೆ ಗುಂಡಿನ ದಾಳಿ ನಡೆಸಿದ ಎಂಬ ಕಾರಣಕ್ಕಾಗಿ ಗ್ರಾಮಸ್ಥರು ಗೋಪಾಲ್​ ರಾಮ್​ನನ್ನು ಥಳಿಸಿದರು. ಕೊಲ್ಲುವ ಉದ್ದೇಶ ಇರಲಿಲ್ಲ. ಆದರೆ, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಎಫ್​ಐಆರ್​ನಲ್ಲಿ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆಸಿದ ಗೋಪಾಲ್​ ರಾಮ್​ ಸಾರ್ವಜನಿಕರ ಜೀವವನ್ನು ಅಪಾಯಕ್ಕೆ ಒಡ್ಡಿದ್ದಾಗಿ ಆರೋಪಿಸಲಾಗಿದೆ. ಇದೀಗ ಪೊಲೀಸರು ಗೋಪಾಲ್​ ರಾಮ್​ನನ್ನು ಥಳಿಸಿದ ಗ್ರಾಮಸ್ಥರಿಗಾಗಿ ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net