

ಕೊಚ್ಚಿ: ಪ್ರತಿಯೊಬ್ಬರ ಬಳಿಯೂ ಇಂದು ಎಟಿಎಂ ಕಾರ್ಡ್ ಇದ್ದೇ ಇದೆ. ಇದರಲ್ಲಿರುವ ನಾಲ್ಕು ನಂಬರ್ನ ಪಿನ್ ಅತ್ಯಂತ ಮಹತ್ವದ್ದು ಮತ್ತು ಖಾಸಗಿಯಾದ್ದು. ಪಿನ್ ನಂಬರ್ ತಿಳಿದುಕೊಂಡು ಇಂದು ಬ್ಯಾಂಕ್ ಖಾತೆಯನ್ನೇ ಲೂಟಿ ಮಾಡಬಹುದು. ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂತಹ ವಂಚನೆಯ ಪ್ರಕರಣಗಳು ಸಾಕಷ್ಟು ನಡೆದಿವೆ. ಇದೀಗ ಇಲ್ಲೊಬ್ಬ ವ್ಯಕ್ತಿ ಮಾಡಿದ ಎರಡು ತಪ್ಪಿನಿಂದ ಬ್ಯಾಂಕ್ ಖಾತೆಯಲ್ಲಿದ್ದ ಹಣವೆಲ್ಲಾ ಕಾಲಿಯಾಗುವಂತಾಗಿದೆ. ಅಷ್ಟಕ್ಕೂ ಆತ ಮಾಡಿರುವ ಮೊದಲ ತಪ್ಪು, ತನ್ನ ಎಟಿಎಂ ಕಾರ್ಡ್ನಲ್ಲಿ ಖಾಸಗಿಯಾಗಿರಬೇಕಾದ ಪಿನ್ ನಂಬರ್ ಬರೆಡಿಟ್ಟಿದ್ದು. ಎರಡನೇ ತಪ್ಪು ಕಾರ್ಡ್ ಕಳೆದುಕೊಂಡಿದ್ದರೂ ಬ್ಯಾಂಕ್ಗೆ ಮಾಹಿತಿ ನೀಡದೇ ಇದ್ದುದು.
ಇದೀಗ ಕೇರಳ ರಾಜ್ಯದ ಚೆಂಗನ್ನೂರ್ ಪೊಲೀಸರು ಕಸದ ತೊಟ್ಟಿಯಲ್ಲಿ ಸಿಕ್ಕಿದ್ದ ಎಟಿಎಂ ಕಾರ್ಡ್ ಉಪಯೋಗಿಸಿ 6.31 ಲಕ್ಷ ರೂಪಾಯಿಯನ್ನು ಡ್ರಾ ಮಾಡಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಮುರುಗನ್ (43) ಬಂಧಿತ ವ್ಯಕ್ತಿ.
ಅಲಪ್ಪುಳದ ಪಾಂಡನಾಡ್ ಎಂಬಲ್ಲಿಯ ಶಾಜಿ ಎಂಬುವವರಿಗೆ ಸೇರಿದ್ದ ಎಟಿಎಂ ಕಾರ್ಡ್ನಿಂದ ಬಾಲಮುರುಗನ್ ಹಣ ಡ್ರಾ ಮಾಡಿದ್ದಾನೆ. ಕಳೆದ ಅಕ್ಟೋಬರ್ನಲ್ಲಿ ತನ್ನ ಮನೆಯ ಕಸ ಎಸೆದು ಬರಲೆಂದು ಶಾಜಿ ಹೋಗಿದ್ದಾಗ ಎಟಿಎಂ ಕಾರ್ಡ್ ಕಳೆದುಕೊಂಡಿದ್ದರು. ಅಚಾನಕ್ ಆಗಿ ಕಳೆದು ಹೋಗಿದ್ದ ಕಾರ್ಡ್ ಬಾಲಮುರುಗನ್ ಎಂಬಾತನಿಗೆ ಸಿಕ್ಕಿದೆ. ದುರಂತವೆಂದರೆ ಶಾಜಿ ತಮ್ಮ ಪಿನ್ ನಂಬರನ್ನು ಕಾರ್ಡ್ ಮೇಲೆ ಬರೆದಿಟ್ಟುಕೊಂಡಿದ್ದರು. ಅಲ್ಲದೆ ತಾನು ಎಟಿಎಂ ಕಾರ್ಡ್ ಕಳೆದುಕೊಂಡಿರುವ ಬಗ್ಗೆ ಬ್ಯಾಂಕಿಗೂ ಮಾಹಿತಿ ನೀಡಿರಲಿಲ್ಲ.
ಕಾರ್ಡ್ನಲ್ಲಿ ಪಿನ್ ನಂಬರ್ ಕಾಣುತ್ತಿದ್ದಂತೆ ಬಾಲಮುರುಗನ್ 15 ದಿನಗಳ ಅಂತರದಲ್ಲಿ ತಿರುವನಂತಪುರಂ, ಪುನಲೂರು, ಮಧುರಾ ಮುಂತಾದೆಡೆ ಸುಮಾರು 6.31 ಲಕ್ಷ ರೂಪಾಯಿ ಮೊತ್ತವನ್ನು ಡ್ರಾ ಮಾಡಿಕೊಂಡಿದ್ದಾನೆ. ಇದಾಗಿ ಕಳೆದ ಅಕ್ಟೋಬರ್ 25 ರಂದು ಶಾಜಿ ಬ್ಯಾಂಕ್ಗೆ ತೆರಳಿ ಚೆಕ್ ಮೂಲಕ ಹಣ ಡ್ರಾ ಮಾಡಲು ಮುಂದಾಗಿದ್ದಾರೆ. ಈ ವೇಳೆ ತನ್ನ ಖಾತೆಯಲ್ಲಿದ್ದ ಹಣವೆಲ್ಲಾ ಕಾಲಿಯಾಗಿರುವುದು ಗೊತ್ತಾಗಿದೆ. ಚಿಂತಿತಗೊಂಡು ಮ್ಯಾನೇಜರ್ ಬಳಿ ವಿಚಾರಿಸಿದಾಗ ಕಳೆದು ಹೋಗಿದ್ದ ಎಟಿಎಂ ಕಾರ್ಡ್ನಿಂದ ಹಣ ಡ್ರಾ ಆಗಿರುವುದು ಗೊತ್ತಾಗಿದೆ.
ಎಟಿಎಂ ಕಾರ್ಡ್ ಕಳೆದುಕೊಂಡಿದ್ದ ಶಾಜಿ, ಕಳೆದ 25 ವರ್ಷಗಳಿಂದ ಅಬ್ರಾಡ್ನಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಖಾತೆಯಲ್ಲಿ ಹಣ ಇಲ್ಲ ಎಂಬುದು ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಕೊಂಡು, ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಬಾಲಮುರುಗನ್ನಿಂದ 6 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)