ಬೀದಿನಾಯಿ ಉಳಿಸಲು ಹೋಗಿ ಪತ್ನಿ ಕಳೆದುಕೊಂಡ ಪತಿ! ಪೊಲೀಸ್​ ಠಾಣೆಯಲ್ಲಿ ಕೊಟ್ಟ ಹೇಳಿಕೆ ಮಾತ್ರ ವಿಚಿತ್ರ

Untitled design (27)
Published on

ಅಹಮದಾಬಾದ್: ದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿಯೇ ಇದೆ. ರಸ್ತೆಯಲ್ಲಿ ಸಂಚರಿಸುವಾಗ ದಾರಿ ಮಧ್ಯೆ ದಿಢೀರ್​ ಓಡಿ ಬರುವ ಬೀದಿ ನಾಯಿಗಳನ್ನು ತಪ್ಪಿಸಲು ಹೋಗಿ ಎಷ್ಟೋ ಮಂದಿ ತಮ್ಮ ಪ್ರಾಣ ಕಳೆದುಕೊಂಡ ಘಟನೆಗಳು ಈ ಹಿಂದೆ ಕೂಡ ವರದಿಯಾಗಿವೆ. ಪ್ರಾಣಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಭೀಕರ ಅಪಘಾತಕ್ಕೆ ತುತ್ತಾಗುತ್ತಾರೆ. ಅದೇ ರೀತಿಯ ಘಟನೆ ಇಲ್ಲಿಯೂ ಸಹ ನಡೆದಿದ್ದು, ವೃತ್ತಿಯಲ್ಲಿ ಶಿಕ್ಷಕನಾದ ಈ ವ್ಯಕ್ತಿ, ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಚಲಿಸುವಾಗ ರಸ್ತೆಗೆ ಅಡ್ಡಲಾಗಿ ಬಂದ ನಾಯಿಯನ್ನು ಬಚಾವ್​ ಮಾಡಲು ಹೋಗಿ ತಮ್ಮ ಪತ್ನಿಯನ್ನು ಕಳೆದುಕೊಂಡ ಘಟನೆ ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದಿದೆ.

ಮುಖ್ಯ ರಸ್ತೆಯಲ್ಲಿ ಬರುವಾಗ ದಾರಿ ಮಧ್ಯೆ ಓಡಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಚಾಲಕ, ರಸ್ತೆಯ ಬದಿಯಲ್ಲಿದ್ದ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಅವರ ಪತ್ನಿ ಗಂಭೀರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ತೀರ ಮನನೊಂದ ಪತಿ, ಪೊಲೀಸ್ ಠಾಣೆಗೆ ತೆರಳಿ ತನ್ನ ಮೇಲೆಯೇ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದರು.

ವರದಿಗಳ ಪ್ರಕಾರ, ಪರೇಶ್ ದೋಷಿ ಎಂದು ಗುರುತಿಸಲ್ಪಟ್ಟಿರುವ ಶಿಕ್ಷಕ ಮತ್ತು ಅವರ ಪತ್ನಿ ಅಮಿತಾ, ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಹಿಂತಿರುಗುತ್ತಿದ್ದರು. ಕಾರು ಸಬರಕಾಂತದ ಹೆದ್ದಾರಿ ತಲುಪುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ನಾಯಿಯನ್ನು ಉಳಿಸುವ ಯತ್ನದಲ್ಲಿ ಪರೇಶ್ ಕಾರನ್ನು ಹೆದ್ದಾರಿ ಪಕ್ಕಕ್ಕೆ ಇಳಿಸುವ ಮೂಲಕ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಕಾರು ಗುದ್ದಿದ ರಭಸಕ್ಕೆ ಬ್ಯಾರಿಕೇಡ್‌ಗಳು ಕಾರಿನ ಮುಂಭಾಗ ಗಾಜು ಮತ್ತು ಕಿಟಕಿಯನ್ನು ಸೀಳಿ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ ಅವರ ಪತ್ನಿಗೆ ಗಂಭೀರ ಗಾಯಗಳನ್ನು ಮಾಡಿದೆ. ಅಪಘಾತದಲ್ಲಿ ಪತ್ನಿ ಸಾವನ್ನಪ್ಪಿದ ಬೆನ್ನಲ್ಲೇ ಪೊಲೀಸ್ ಠಾಣೆಗೆ ಬಂದ ಪರೇಶ್ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net