

ನವದೆಹಲಿ: ಮೊನ್ನೆಮೊನ್ನೆಯಷ್ಟೇ ಒಬ್ಬರು ಮಹಿಳೆ ಕಸದ ವಾಹನಕ್ಕೆ ಚಿನ್ನದ ಸರ ಹಾಕಿ ಪರದಾಡಿದ್ದು, ಆತಂಕಗೊಂಡಿದ್ದು, ಕಡೆಗೆ ಸಮಯೋಚಿತ ನಿರ್ಧಾರದಿಂದ ಅದನ್ನು ವಾಪಸ್ ಪಡೆದು ಸಂಭ್ರಮಿಸಿದ್ದನ್ನೆಲ್ಲ ಕೇಳಿದ್ದೀರಿ. ಇದು ಕೂಡ ಅಂಥದ್ದೇ ಒಂದು ಸುದ್ದಿ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಕಸ ಎಸೆಯಲು ಎಂದು ಬಂದು ಕಸದ ವಾಹನದೊಳಕ್ಕೇ ಬಿದ್ದುಬಿಟ್ಟ ಅತ್ಯಪರೂಪದ ಪ್ರಸಂಗವೊಂದು ನಡೆದಿದೆ.
ಕಸ ಹಾಕಲೂ ಶಾರ್ಟ್ ಕಟ್ ಕಂಡುಕೊಳ್ಳಲು ಹೋಗಿ ಫಜೀತಿಗೆ ಒಳಗಾದ ವ್ಯಕ್ತಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೋ ತುಣುಕು ವೈರಲ್ ಆಗಿದೆ. ಮಾತ್ರವಲ್ಲ ಹಲವರಿಗೆ ಇದು ತಮಾಷೆಯ ದೃಶ್ಯವಾಗಿಯೂ ಕಂಡಿದೆ.
ಮನೆಯ ಬೀದಿಗೆ ಬರುವ ಕಸದ ವಾಹನಕ್ಕೆ ಸುಲಭದಲ್ಲೇ ಕಸ ಹಾಕಲು ಮುಂದಾಗಿದ್ದೇ ಈ ಅವಾಂತರಕ್ಕೆ ಕಾರಣ. ರಸ್ತೆಗೆ ತಾಗಿಕೊಂಡೇ ಮನೆ ಇರುವಂಥ ಈ ವ್ಯಕ್ತಿ, ಮನೆಯ ಮೊದಲ ಮಹಡಿಯಿಂದ ನೇರವಾಗಿ ವಾಹನದೊಳಕ್ಕೆ ಕಸ ಎಸೆಯಲು ಹೋಗಿದ್ದಾರೆ. ಆದರೆ ಆಯತಪ್ಪಿ ವಾಹನದೊಳಕ್ಕೇ ಬಿದ್ದುಬಿಟ್ಟಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. (ಏಜೆನ್ಸೀಸ್)