ನಕಲಿ ಹೆಸರು, ತಲೆಕೂದಲು, ಉದ್ಯೋಗ… ಮದುವೆ ಮಂಟಪದಲ್ಲಿ ಬಟಾಬಯಲಾಯಿತು ಈತ ಮಾಡಿದ್ದ ಮಾಸ್ಟರ್​ಪ್ಲಾನ್​!

Marriage
Published on

ಉತ್ತರಪ್ರದೇಶ: ಮಹಿಳೆಯನ್ನು ಮದುವೆಯಾಗಬೇಕೆಂಬ ಆಸೆಯಿಂದ ತನ್ನ ಗುರುತನ್ನು ಮರೆಮಾಚಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಕುಶಿನಗರದ ವ್ಯಕ್ತಿಯೊಬ್ಬನನ್ನು ಇದೀಗ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ತಬ್ರೇಜ್ ಆಲಂ ಎಂದು ಗುರುತಿಸಲಾಗಿದೆ. ಮೂರು ಗಂಟು ಹಾಕಲೆಂದು ಮೂರಕ್ಕೂ ಹೆಚ್ಚು ಸುಳ್ಳು, ನಕಲಿ ಐಡಿಯಾಗಳನ್ನು ಪ್ರಯೋಗಿಸಿದ ಈತನ ಕಿಡಿಗೇಡಿ ಕೆಲಸವನ್ನು ಸದ್ಯ ಪೊಲೀಸರು ಬಟಾಬಯಲು ಮಾಡಿದ್ದೇ ರೋಚಕ.

ತಬ್ರೇಜ್ ಆಲಂ ಎಂಬಾತ ತನ್ನ ಮೂಲ ಹೆಸರನ್ನೇ ಮರೆಮಾಚಿ, ಆರ್ಯನ್ ಪ್ರಸಾದ್ ಎಂದು ನಕಲಿ ಹೆಸರನ್ನು ಇಟ್ಟುಕೊಂಡು, ಮಹಿಳೆಯೊಬ್ಬಳಿಗೆ ವಂಚಿಸಿದ್ದಾನೆ ಎಂದು ಗೋರಖ್‌ಪುರ ಪೊಲೀಸ್ ಇನ್ಸ್‌ಪೆಕ್ಟರ್ ಮಹಿಳೆ ನೀಡಿದ ಮಾಹಿತಿಯನ್ನು ಇದೀಗ ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ತಬ್ರೇಜ್ ಆಲಂ ಮಹಿಳೆಯೊಂದಿಗೆ ಒಂದು ವರ್ಷದಿಂದ ಸಂಬಂಧ ಹೊಂದಿದ್ದ, ಈ ವಿಷಯ ಆಕೆಯ ಕುಟುಂಬಕ್ಕೆ ಗೊತ್ತಾಗಿದೆ. ಈ ಬೆನ್ನಲ್ಲೇ ಮೊದ ಮೊದಲು ಮನೆಯಲ್ಲಿ ಇವರಿಬ್ಬರ ವಿವಾಹಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ ತದನಂತರ ಮಹಿಳೆಯ ಕುಟುಂಬವು ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದರು.

ಇದರ ಬೆನ್ನಲ್ಲೇ ಇದೇ ಫೆಬ್ರವರಿ 25ರಂದು ಮದುವೆ ನಿಶ್ಚಯಿಸಲಾಗಿತ್ತು. ಅಂದುಕೊಂಡಂತೆಯೇ ನಡೆಯಬೇಕಿತ್ತು. ಆದರೆ, ಸತ್ಯ ಯಾವತ್ತಿದ್ದರೂ ಹೊರಗೆ ಬರಲೇಬೇಕು ಎನ್ನುವಂತೆ ತಬ್ರೇಜ್ ಆಲಂನ ಎಲ್ಲಾ ಸುಳ್ಳುಗಳು ಮದುವೆ ಮಂಟಪದಲ್ಲಿ ಬಟಾಬಯಲಾಗಿದೆ. ಹುಡುಗ ಕುಟುಂದದಿಂದ ವಧುಗೆ ಚಿನ್ನದ ಆಭರಣ ಮತ್ತು ವಸ್ತ್ರವನ್ನು ಕೊಡಬೇಕಿತ್ತು. ಹೀಗಿರುವಾಗ ಮದುವೆಗೆ ರಾಯಲ್ ಆಗಿ ಅಲಂಕೃತ ಕಾರಿನಲ್ಲಿ ಎಂಟ್ರಿ ಕೊಟ್ಟ ತಬ್ರೇಜ್​, ಅಸಲಿ ಚಿನ್ನದ ಬದಲಿಗೆ ನಕಲಿ ಗೋಲ್ಡ್​ ಕೊಟ್ಟಿರುವುದು ವಧು ಕುಟುಂಬದವರಿಂದ ಪತ್ತೆಯಾಗಿದೆ.

ವಧುವಿನ ಮನೆಯವರು ಚಿನ್ನಾಭರಣ ನಕಲಿ ಎಂದು ಸ್ಥಳದಲ್ಲೇ ಶಂಕಿಸಿದ್ದು, ಅದನ್ನು ಸ್ಥಳದಲ್ಲೇ ಚುರುಕಾಗಿ ಪರಿಶೀಲಿಸಿದ್ದಾರೆ. ಅನುಮಾನಗಳು ದೃಢಪಟ್ಟಿವೆ. ಈ ಘಟನೆ ಬೆಳಕಿಗೆ ಬರುತ್ತಿದಂತೆ ವಿವಾದ ಭುಗಿಲೆದ್ದಿದೆ. ಮಾತಿಗೆ ಮಾತು ಬೆಳೆದು ಜಟಾಪಟಿ ತಾರಕಕ್ಕೇರುತ್ತಿದ್ದಂತೆ ವರನ ತಲೆಯಲ್ಲಿದ್ದ ನಕಲಿ ಕೂದಲು ಕೆಳಗೆ ಬಿದ್ದಿದೆ. ಇದನ್ನು ನೋಡಿದ ಕೂಡಲೇ ಗಾಬರಿಗೊಂಡ ಕುಟುಂಬಸ್ಥರು, ಅವನ ಜೇಬಿನಲ್ಲಿದ್ದ ನಕಲಿ ಆಧಾರ್ ಕಾರ್ಡ್ ಪರಿಶೀಲಿಸಿದರು.

ತನ್ನ ಗುರುತಿನ ಬಗ್ಗೆ ಆತ ಸುಳ್ಳು ಹೇಳಿದ್ದಾನೆ ಎಂಬುದು ದೃಢಪಟ್ಟಿದೆ. ಮದುವೆಯಾಗಲು ಇಷ್ಟೊಂದು ಸುಳ್ಳು ಹೇಳಿದ್ದಾನೆ ಎಂಬುದು ತಿಳಿಯುತ್ತಿದ್ದಂತೆ ಯುವತಿಯ ಮನೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮದುವೆ ಸ್ಥಳಕ್ಕೆ ಆಗಮಿಸಿ ತಬ್ರೇಜ್ ಆಲಂನನ್ನು ಬಂಧಿಸಿದ್ದಾರೆ. ಸದ್ಯ ತಬ್ರೇಜ್ ಆಲಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ತ್ಯಾಗಿ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net