

ಘಾಜಿಪುರ್: 2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಬಹುವಾಗಿ ಆಸೆ ಇಟ್ಟುಕೊಂಡಿದ್ದ ವ್ಯಾಪಾರಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುಪಿ ಚುನಾವಣೆಗೆ ಬಿಎಸ್ಪಿ ಟಿಕೆಟ್ ಕೇಳಿದ್ದೆ. ಆದರೆ ಅವರು ನಿರಾಕರಣೆ ಮಾಡಿದ್ದೇ ನನ್ನ ಆತ್ಮಹತ್ಯೆಗೆ ಕಾರಣವೆಂದು ಡೆತ್ನೋಟ್ನಲ್ಲಿ ತಿಳಿಸಿದ್ದರು.
ಮುನ್ನು ಪ್ರಸಾದ್ ಎಂಬುವರು ಆತ್ಮಹತ್ಯೆಗೆ ಶರಣಾದವರು. ಉತ್ತರ ಪ್ರದೇಶ ಚುನಾವಣೆಗೆ ಬಿಎಸ್ಪಿಯಿಂದ ಟಿಕೆಟ್ ಬಯಸಿದ್ದೆ. ಆದರೆ ಮಾಯಾವತಿಯವರು ಟಿಕೆಟ್ ಬೇಕು ಎಂದರೆ 2 ಕೋಟಿ ರೂಪಾಯಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರು ಎಂಬುದನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಬೇಕು ಎನ್ನುವವರಿಗೆ ಇದು ಬೇಸರದ ವಿಷಯ!
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಬಿಜೆಪಿ ಕೋ-ಆರ್ಡಿನೇಟರ್ ಗುಡ್ಡು ರಾಮ್, ಮುನ್ನು ಪ್ರಸಾದ್ ಅವರು ನಮ್ಮ ಪಕ್ಷದಲ್ಲಿ ಇದ್ದವರು ಅಲ್ಲ. ಯಾವುದೇ ಕಾರ್ಯದಲ್ಲೂ ತೊಡಗಿಸಿಕೊಂಡಿಯೂ ಇಲ್ಲ. ಪಕ್ಷಕ್ಕೆ ತೊಂದರೆ ಮಾಡುವ ಸಲುವಾಗಿ ಹೀಗೆ ಸೂಸೈಡ್ ನೋಟ್ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ನೆರೆಮನೆಯಾತ ಬೇರೆಯದೇ ಸತ್ಯ ಹೇಳಿದ್ದಾರೆ. ಮುನ್ನು ಬಿಎಸ್ಪಿಯ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ. ಅವನಿಗೆ ಟಿಕೆಟ್ ನೀಡುವುದಾಗಿ ಪಕ್ಷದ ಅಧ್ಯಕ್ಷರೂ ಹೇಳಿದ್ದರು ಎಂದು ತಿಳಿಸಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ತನಿಖೆ ಪ್ರಾರಂಭವಾಗಿದೆ. ಈಗಲೇ ಏನೂ ಹೇಳುವುದಿಲ್ಲ ಎಂದಿದ್ದಾರೆ.