ಗಾರ್ಬಾ ನೃತ್ಯಕ್ಕೆ ಯುವತಿಗೆ ಒತ್ತಾಯ: ಪ್ರಶ್ನಿಸಿದ್ದಕ್ಕೆ ಯುವಕರಿಬ್ಬರಿಂದ ಯುವತಿ ತಂದೆ ಹತ್ಯೆ

garba
Published on

ನವದೆಹಲಿ: ಗಾರ್ಬಾ ಕಾರ್ಯಕ್ರಮದಲ್ಲಿ ತನ್ನ ಮಗಳಿಗೆ ಕಿರುಕುಳ ನೀಡಿದ ಇಬ್ಬರು ವ್ಯಕ್ತಿಗಳೊಂದಿಗೆ ಹೊಡೆದಾಟ ನಡೆಸಿದ ವೇಳೆ 52 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹರಿಯಾಣದ ಫರಿದಾಬಾದ್‌ನ ರೆಸಿಡೆನ್ಶಿಯಲ್ ಸೊಸೈಟಿಯೊಂದರಲ್ಲಿ ದುರಂತ ನಡೆದಿದೆ.

ಫರಿದಾಬಾದ್‌ನ ಸೆಕ್ಟರ್ 87 ನಲ್ಲಿರುವ ಪ್ರಿನ್ಸೆಸ್ ಪಾರ್ಕ್ ಸೊಸೈಟಿಯ ನಿವಾಸಿಗಳಾದ ಪ್ರೇಮ್ ಮೆಹ್ತಾ ಮತ್ತು ಅವರ ಕುಟುಂಬ ಸದಸ್ಯರು ಸೋಮವಾರ ರಾತ್ರಿ ವಸತಿ ಸಂಕೀರ್ಣದ ಆವರಣದಲ್ಲಿ ಆಯೋಜಿಸಿದ್ದ ಗಾರ್ಬಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ವಸತಿ ಸಂಕೀರ್ಣದ ಇಬ್ಬರು ಯುವಕರು ದಾಂಡಿಯಾ ನೃತ್ಯದ ಸಮಯದಲ್ಲಿ ಮೆಹ್ತಾ ಅವರ 25 ವರ್ಷದ ಪುತ್ರಿ ಬಳಿಗೆ ಬಂದು ಅವರ ಮೊಬೈಲ್​ ಸಂಖ್ಯೆಯನ್ನು ಕೇಳಿದ್ದರು. ಅಷ್ಟೇ ಅಲ್ಲ, ತಮ್ಮ ಜೊತೆ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಇದು ಮೆಹ್ತಾ ಮತ್ತು ಇಬ್ಬರು ಯುವಕರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭ ಮೆಹ್ತಾ, ಅವರ ಪತ್ನಿ ಮತ್ತು ಅವರ ಪುತ್ರ ಸೇರಿಕೊಂಡು ಜಗಳಕ್ಕೆ ಬಂದ ಯುವಕರನ್ನು ಎದುರಿಸಿದ್ದಾರೆ. ತಮ್ಮ ಮಗಳನ್ನು ಏಕೆ ಸಂಪರ್ಕಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಎರಡು ಕಡೆಯವರು ಕೊರಳಪಟ್ಟಿ ಹಿಡಿದುಕೊಂಡು ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಯುವಕರು ಮೆಹ್ತಾ ಅವರನ್ನು ನೆಲದ ಮೇಲೆ ತಳ್ಳಿದ್ದಾರೆ. ಅವರು ತಲೆ ಜೋರಾಗಿ ನೆಲಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಅರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಮೆಹ್ತಾ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಜಮೀಲ್ ಖಾನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net