VIDEO | ಸ್ಟಂಟ್ ತಂದ ಆಪತ್ತು!; ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ವ್ಯಕ್ತಿ ಮೃತ್ಯು

Untitled-design-2023-10-29T191654.191
Published on

ಪಂಜಾಬ್‌: ಜಾತ್ರೆಯಲ್ಲಿ ಏರ್ಪಡಿಸಿದ್ದ ಅಖಾಡದಲ್ಲಿ ತನ್ನ ಟ್ರ್ಯಾಕ್ಟರ್ ಬಳಸಿಕೊಂಡು ಸಾಹಸ ಪ್ರದರ್ಶಿಸುತ್ತಿದ್ದ 29 ವರ್ಷದ ಸ್ಟಂಟ್‌ಮ್ಯಾನ್‌, ಆಯಾತಪ್ಪಿ ವಾಹನ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಪಂಜಾಬ್‌ನ ಗುರುದಾಸ್‌ಪುರದ ಬಟಾಲಾದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟ ಸ್ಟಂಟ್‌ಮ್ಯಾನ್ ಅನ್ನು ಸುಖಮನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಜಾತ್ರೆಯಲ್ಲಿ ತಮ್ಮ ಟ್ರ್ಯಾಕ್ಟರ್​ ಬಳಸಿಕೊಂಡು ಮಾಡುತ್ತಿದ್ದ ಸಾಹಸ ಪ್ರದರ್ಶನದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಘಟನೆಯ ವಿವರ: ಸರಚೂರು ಗ್ರಾಮದ ಕ್ರೀಡಾ ಮೈದಾನದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಸಾಹಸ ಪ್ರದರ್ಶಿಸಲು ಸುಖಮನ್‌ದೀಪ್ ಸಿಂಗ್ ತಮ್ಮ ಟ್ರ್ಯಾಕ್ಟರ್‌ನೊಂದಿಗೆ ಆಗಮಿಸಿದ್ದರು. ಸ್ಟಂಟ್​ ಮಾಡುತ್ತಿದ್ದಾಗ ಟ್ರಾಕ್ಟರ್‌ನ ಮುಂಭಾಗದ ಚಕ್ರಗಳನ್ನು ಮೇಲಕ್ಕೆತ್ತಿ, ಹಿಂಬದಿಯ ಟೈರ್‌ಗಳನ್ನು ನೆಲದ ಮೇಲೆ ಒತ್ತಿದ್ದಾರೆ. ತದನಂತರ ಟ್ರ್ಯಾಕ್ಟರ್‌ ಜತೆಗೆ ಓಡಿದ್ದಾರೆ.

ಆದ್ರೆ, ಈ ಸಾಹಸದ ವೇಳೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಜನರತ್ತ ಚಲಿಸಲು ಮುಂದಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಸುಖಮನ್‌ದೀಪ್ ಅದನ್ನು ನಿಯಂತ್ರಣಕ್ಕೆ ತರಲು ಟ್ರ್ಯಾಕ್ಟರ್ ಬಳಿ ಬಂದಾಗ, ಆಯಾತಪ್ಪಿ ಚಕ್ರದ ಕೆಳೆಗೆ ಸಿಲುಕಿಕೊಂಡರು. ಸಮೀಪದಲ್ಲೇ ಇದ್ದ ಇಬ್ಬರು ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿದ್ದ ಸುಖಮನ್ದೀಪ್ ಸಿಂಗ್ ಅವರನ್ನು ಬಿಡಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಈ ದುರಂತ ಸಂಭವಿಸಿದ ಕೂಡಲೇ ಜಾತ್ರೆ ಆಯೋಜಿಸಿದ್ದ ಆಡಳಿತವು ಮೇಳವನ್ನು ಅಂತ್ಯಗೊಳಿಸುವುದಾಗಿ ಘೋಷಿಸಿತು. ಫತೇಘರ್ ಚುರಿಯನ್ ನಿವಾಸಿಯಾದ ಸುಖಮನ್‌ದೀಪ್ ಸಿಂಗ್, ಅವರ ಪೋಷಕರ ಏಕೈಕ ಪುತ್ರನಾಗಿದ್ದು, ರೈತರ ಮೆರವಣಿಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಘಟನೆಯಲ್ಲಿ ಸಾವಿಗೀಡಾದ ಸುಖಮನ್‌ದೀಪ್ ಅವರನ್ನು ನೆನೆದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net