ಟೆರಾಸ್ ಮೇಲಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

Crime Logo
Published on

ಬೆಂಗಳೂರು: ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ಮನೆಯ ಟೆರಾಸ್ ಮೇಲಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

ದೇವಸಂದ್ರದ ನೇತ್ರಾವತಿ ಲೇಔಟ್ ನಿವಾಸಿ ಗೋಪಾಲ್ ಸಿಂಗ್(೩೮) ಮೃತರು. ಶುಕ್ರವಾರ ತಡರಾತ್ರಿ ೧೨.೩೦ಕ್ಕೆ ಈ ಘಟನೆ ನಡೆದಿದೆ.

ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ಸಿಂಗ್, ಅವಿವಾಹಿತರಾಗಿದ್ದರು. ಕೆ.ಆರ್.ಪುರದ ದೇವಸಂದ್ರದ ನೇತ್ರಾವತಿ ಲೇಔಟ್‌ನಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ಪಾಲಕರೊಂದಿಗೆ ವಾಸವಾಗಿದ್ದರು. ಶುಕ್ರವಾರ ರಾತ್ರಿ ಸಹೋದರಿ ಮತ್ತು ಪಾಲಕರ ಜತೆ ಊಟ ಮಾಡಿದ ಬಳಿಕ ಟೆರಾಸ್ ಮೇಲೆ ಎಲ್ಲರೂ ಕುಳಿತುಕೊಂಡಿದ್ದರು. ಬಳಿಕ ಕೆಲ ಹೊತ್ತು ವಾಯುವಿವಾರ ಮಾಡಿದ್ದ ಗೋಪಾಲ್ ಸಿಂಗ್, ಮೇಲಿನ ಬಾಗಿಲು ಹಾಕಿಕೊಂಡು ಬರುತ್ತೇನೆ. ನೀವು ಹೋಗಿ ಎಂದು ಪಾಲಕರನ್ನು ಕೆಳಗೆ ಕಳುಹಿಸಿದ್ದಾನೆ. ಬಳಿಕ ಟೆರಾಸ್ ಮೇಲೆ ಸ್ವಲ್ಪ ಹೊತ್ತು ಮನೆ ವಾಯುವಿಹಾರ ಮಾಡಲು ಮುಂದಾಗಿದ್ದು, ಈ ವೇಳೆ ಕಾಲು ಜಾರಿ ಕೆಳಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗಿದೆ. ಮತ್ತೊಂದೆಡೆ ಆರಂಭದಲ್ಲಿ ಗೋಪಾಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಅವರ ಪಾಲಕರು, ಪುತ್ರ ಕಾಲು ಜಾರಿ ಮೃತಪಟ್ಟಿದ್ದಾನೆಯೇ ಹೊರತು ಬೇರೆ ಯಾವುದೇ ಕಾರಣಗಳಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net