

ಆತ ಸಾವಿನ ರಾಯಭಾರಿ. ಏಕೆಂದರೆ, ಮಾದಕ ವಸ್ತುಗಳ ಮಾರಾಟವೇ ಆತ ನ ದಂಧೆಯಾಗಿತ್ತು. ಹೆರಾಯಿನ್ ನೀಡಿ ಅಪ್ರಾಪ್ರೆಯನ್ನು ಕೊಂದು ಹಾಕಿದ್ದಲ್ಲದೇ, ಶವವನ್ನು ಕಣಿವೆಯಲ್ಲಿ ಬಿಸಾಕಿದ್ದ. ಆದರೆ, ಆಕೆಯ ಹತ್ಯೆಗೆ ಆತನೇ ಕಾರಣ ಎಂದು ನಿರೂಪಿಸಿದ್ದು ಮಾತ್ರ ಆರೋಪಿಯ ಕೋಣೆಯಲ್ಲಿದ್ದ ಅರೆಸುಟ್ಟ ಆಲ್ಯುಮಿನಿಯಂ ಹಾಳೆ ತುಣುಕುಗಳು.
ಶಿಮ್ಲಾದ ಚಿರಗಾಂವ್ ಜಿಲ್ಲೆಯ ಬೊಂಡಾ ಹಳ್ಳಿಯ ಯುವತಿ 2018ರ ಮಾರ್ಚ್ 20 ರಂದು ಮನೆಯಿಂದ ಕಾಣೆಯಾಗಿದ್ದಳು. ಆಕೆಯನ್ನು ಗ್ರಾಮದಿಂದ ರಾತ್ರಿ ಕಾರಿನಲ್ಲಿ ಕರೆದೊಯ್ದ ಆರೋಪಿ ಆಕೆಗೆ ಹೆರಾಯಿನ್ ನೀಡಿದ್ದ. ದಾರಿಯಲ್ಲಿ ಮತ್ತೊಬ್ಬ ಯುವತಿಯನ್ನು ಕಾರಿಗೆ ಹತ್ತಿಸಿಕೊಂಡಿದ್ದ. ಮರುದಿನ ಶಿಮ್ಲಾ ತಲುಪಿದ್ದ ಆವರು ಯುವತಿಯನ್ನು ಮಾರ್ಕೆಟ್ ಬಳಿ ಇಳಿಸಿದ್ದರು. ಕೆಲ ಸಮಯದ ಬಳಿಕ ಅಲ್ಲಿಗೆ ಬಂದಾಗ ಆಕೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಗೊತ್ತಾಗಿತ್ತು. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು. ಆಕೆ ಶವವನ್ನು ಶಿಮ್ಲಾ ಹೊರವಲಯದ ಕಣಿವೆಗೆ ಎಸೆದಿದ್ದ. ಜತೆಗೆ, ಆಕೆಯ ಬ್ಯಾಗ್ ಹಾಗೂ ಮೊಬೈಲ್ ಫೋನ್ ಕೂಡ ಎಸೆದಿದ್ದ.
ಇದಾದ ಕೆಲ ದಿನಗಳ ಬಳಿಕ ಪ್ರಕರಣಕ್ಕೆ ಸಂಬಧಿಸಿದಂತೆ 42 ವರ್ಷ ವಯಸ್ಸಿನ ಪೃಥ್ವಿರಾಜ್ನನ್ನು ಪೊಲೀಸರು ಬಂಧಿಸಿದ್ದರು. ಯುವತಿಯ ಸಾವಿಗೆ ಹೆರಾಯಿನ್ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ್ದೇ ಕಾರಣ ಎಂದು ಗೊತ್ತಾಗಿತ್ತು.
ಆಕೆಗೆ ಪ್ರಥ್ವಿರಾಜನೇ ಹೆರಾಯಿನ್ ನೀಡಿದ್ದ ಎಂದು ಸಾಕ್ಷಿಗಳು ಹೇಳಿದ್ದರೂ, ಆರೋಪಿಯೇ ಹೆರಾಯಿನ್ ದಂಧೆ ನಡೆಸುತ್ತಿದ್ದ ಎಂಬುದು ಸಾಬೀತಾಗಿದ್ದು ಆತನ ಕೋಣೆಯಲ್ಲಿ ಸಿಕ್ಕ ಆಲ್ಯುಮಿನಿಯಂ ಫಾಯಿಲ್ಗಳಿಂದ. ಅವನ್ನು ವಶಪಡಿಸಿಕೊಂಡು ಪರೀಕ್ಷೆ ನಡೆಸಿದಾಗ ಅದರಲ್ಲಿ ಹೆರಾಯಿನ್ ಅವಶೇಷಗಳು ಪತ್ತೆಯಾಗಿದ್ದವು.
ಮಾದಕ ವ್ಯಸನಿಗಳು ಅಲ್ಯುಮಿನಿಯಂ ಫಾಯಿಲ್ ಮೇಲೆ ಹೆರಾಯಿನ್ ಕಾಯಿಸಿ ಅಥವಾ ಸುಟ್ಟು ಅದರ ಹೊಗೆಯನ್ನು ಎಳೆದುಕೊಳ್ಳುತ್ತಾರೆ.
ಇದೇ ಸಾಕ್ಷ್ಯವನ್ನು ಆಧರಿಸಿ ತೀರ್ಪು ನೀಡಿದ ನ್ಯಾಯಾಲಯ, ಹೆರಾಯಿನ್ ನೀಡುವುದೆಂದರೆ ವಿಷ ನೀಡಿದಂತೆ. ಹೀಗಾಗಿ ಆರೋಪಿಯೇ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಅಭಿಪ್ರಾಯಪಟ್ಟು ಆರೋಪಕ್ಕೆ 10 ವರ್ಷಗಳ ಶಿಕ್ಷೆ ವಿಧಿಸಿತು.