ಡೆತ್‌ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

crime
Published on

ಬೆಂಗಳೂರು: ಕಳ್ಳತನ ಆರೋಪದದಿಂದ ಮನನೊಂದು, ಮನೆ ಮಾಲೀಕರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಕೇರಳ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಪುಲಕೇಶಿನಗರದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಕೇರಳ ಮೂಲದ ವರ್ಗೀಸ್(೪೩) ಆತ್ಮಹತ್ಯೆ ಮಾಡಿಕೊಂಡವರು.

ಒಂದು ವರ್ಷದ ಹಿಂದೆ ಕೇರಳದಿಂದ ಬೆಂಗಳೂರಿಗೆ ಬಂದಿದ್ದ ವರ್ಗೀಸ್ ಗ್ರೀನ್ ಅವಿನ್ಯೂ ಅಪಾರ್ಟ್‌ಮೆಂಟ್‌ನಲ್ಲಿರುವ ಮಹಿಳೆಯೊಬ್ಬರ ಬಳಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಮಹಿಳೆ ಇದ್ದ ಅಪಾರ್ಟ್‌ಮೆಂಟ್‌ನ ಟೆರಾಸ್ ಮೇಲಿರುವ ಕೋಣೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಮನೆ ಮಾಲೀಕರಾದ ಮಹಿಳೆ, ಮನೆಯಲ್ಲಿ ಸುಮಾರು ೨೫೦ ಗ್ರಾಂ ಚಿನ್ನಾಭರಣ ಕಳುವಾಗಿದ್ದು, ಅದನ್ನು ವರ್ಗೀಸ್ ಮತ್ತು ಮತ್ತೊಬ್ಬ ಕೆಲಸದಾಕೆ ಕಳವು ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವರ್ಗೀಸ್‌ನನ್ನು ಕರೆಸಿ ವಿಚಾರಣೆ ನಡೆಸಿ, ಕಳುಹಿಸಿದ್ದರು. ಈ ಘಟನೆಯಿಂದ ನೊಂದಿದ್ದ ವರ್ಗೀಸ್, ಆ.೨೧ರಂದು ಟೆರಾಸ್‌ನಲ್ಲಿರುವ ತನ್ನ ಕೋಣೆಯ ಶೌಚಾಲಯದ ಕಿಟಕಿಗೆ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಮಲೆಯಾಳಂ ಭಾಷೆಯಲ್ಲಿ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನನ್ನ ಸಾವಿಗೆ ಮಾಲೀಕರೇ ಕಾರಣ:
ವರ್ಗೀಸ್ ಬಳಿ ಪತ್ತೆಯಾಗಿರುವ ಡೆತ್‌ನೋಟ್‌ನಲ್ಲಿ ಆತ ವಾಸವಾಗಿದ್ದ ಮನೆ ಹಾಗೂ ಕಾರು ಮಾಲೀಕರಾದ ಮಹಿಳೆ ವಿರುದ್ಧ ಆರೋಪಿಸಿದ್ದಾನೆ. ಈ ಹಿಂದೆ ತನ್ನ ವಿರುದ್ಧ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ದೂರು ನೀಡಿದ್ದರು. ಆದರೆ, ನಾನು ಯಾವುದೇ ಕಳವು ಮಾಡಿಲ್ಲ. ಆದರೂ ಪೊಲೀಸ್ ವಿಚಾರಣೆಗೆ ಒಳಗಾಗಿದ್ದೆ. ಅದರಿಂದ ನೊಂದಿದ್ದು, ನನ್ನ ಸಾವಿಗೆ ಮನೆ ಮಾಲೀಕರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಈ ಸಂಬಂಧ ಆಕೆಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net