

ಮುಂಬೈ: ಹೆಂಡತಿ ಬಿಟ್ಟು ಹೋದ ಮೇಲೆ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಮೂರೂ ಮಕ್ಕಳನ್ನು ಹತ್ಯೆ ಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ಕೈಲಾಶ್ ಪರ್ಮಾರ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ 8.30 ಕ್ಕೆ ನಲಸೋಪರಾದ ಆತನ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದ್ದು, ಬೆಳಕಿಗೆ ಬಂದಿದೆ. ಪರ್ಮಾರ್ ನ ಪತ್ನಿ ಸುಮಾರು 45 ದಿನಗಳ ಹಿಂದೆ ಆತನನ್ನು ತೊರೆದಿದ್ದರು.
ಕೈಲಾಶ್ ತನ್ನ ಮೂವರು ಮಕ್ಕಳಾದ 12 ವರ್ಷದ ಮಗ, 17 ವರ್ಷದ ಮತ್ತು 13 ವರ್ಷದ ಹೆಣ್ಣು ಮಕ್ಕಳನ್ನು ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಮಕ್ಕಳು ನಿದ್ರೆಯಲ್ಲಿದ್ದಾಗ ಆತ ಇರಿದಿರುವ ಕುರಿತು ಶಂಕಿಸಲಾಗುತ್ತಿದೆ.
ಇದನ್ನೂ ಓದಿ: ಅತ್ಯಾಚಾರ ಆರೋಪ, ಪೇದೆ ಬಂಧನ
ಪೊಲೀಸರ ಪ್ರಕಾರ, ಆತ ಮೊದಲು ಸೀಲಿಂಗ್ ಫ್ಯಾನ್ನಿಂದ ನೇಣು ಬಿಗಿದುಕೊಂಡು ತನ್ನ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಅದರಲ್ಲಿ ಯಶಸ್ವಿಯಾಗದಿದ್ದಾಗ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೈಲಾಶ್ ಹೆಂಡತಿ ಆತನನ್ನು ತೊರೆದ ನಂತರ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಆತನ ತಂದೆ ವಿಜು ಹೇಳಿದ್ದಾರೆ. ಕೈಲಾಶ್ ಪತ್ನಿಯ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದರಿಂದ ಅಸಮಾಧಾನಗೊಂಡಿದ್ದ.
ಶನಿವಾರ ಸಂಜೆ 4 ಗಂಟೆಗೆ ಕೈಲಾಶ್ ನ ಮನೆಯ ಬಾಗಿಲು ಬಡಿದು ಚಹಾಕ್ಕಾಗಿ ಬರಲು ಆತನ ತಂದೆ ಹೇಳಿದಾಗ ಕೈಲಾಶ್ ತನ್ನ ಮಕ್ಕಳು ಮಲಗಿದ್ದು, ನಂತರ ಬರುವುದಾಗಿ ತಿಳಿಸಿದ್ದ .
ರಾತ್ರಿ 8.30 ರ ಸುಮಾರಿಗೆ ಆತನ ತಂದೆ ಮತ್ತೆ ಆತನ ಮನೆಗೆ ತೆರಳಿ ಬಾಗಿಲು ಬಡಿದಾಗ ಅಲ್ಲಿಂದ ಯಾವುದೇ ಉತ್ತರ ಬರಲಿಲ್ಲ, ನೆರೆಹೊರೆಯವರ ಸಹಾಯದಿಂದ ಬಾಗಿಲು ತೆರೆದಾಗ ಕೈಲಾಶ್ ರಕ್ತದ ಮಡುವಿನಲ್ಲಿ ಮಲಗಿರುವುದು ಹಾಗೂ ಆತನ ಮೂವರು ಮಕ್ಕಳೂ ಅವನ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂತು.
ನಾಲ್ವರನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಯಾವುದೇ ಗದ್ದಲ ಕೇಳಿಬಂದಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಪೊಲೀಸರು ಕೈಲಾಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದು, ಆತ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.