More

    ಲಡಾಖ್ ಗಡಿಗೆ ವಾಯುರಕ್ಷಣಾ ವ್ಯವಸ್ಥೆ ರವಾನೆ; ಚೀನಾ ಸೇನಾ ಜಮಾವಣೆಗೆ ಭಾರತ ಪ್ರತ್ಯುತ್ತರ

    ನವದೆಹಲಿ: ಭಾರತ-ಚೀನಾ ಲಡಾಖ್ ಗಡಿ ಸಂಘರ್ಷದ ಬಳಿಕ ಉಭಯ ದೇಶಗಳು ಗಡಿಯಲ್ಲಿ ಹೆಚ್ಚುವರಿ ಸೇನೆ ಜಮಾವಣೆ ಮಾಡಿಟ್ಟುಕೊಂಡಿವೆ. ಈ ಬೆನ್ನಲ್ಲೇ ಎಲ್​ಎಸಿ ಬಳಿ ಚೀನಾದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್​ಗಳ ಹಾರಾಟ ಹೆಚ್ಚಳವಾಗಿರುವ ಕಾರಣ ಭಾರತ ಲಡಾಖ್ ವಲಯದಲ್ಲಿ ತ್ವರಿತ ಪ್ರಕ್ರಿಯೆ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ.

    ಚೀನಾದ ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್​ಗಳ ಯಾವುದೇ ಸಂಭಾವ್ಯ ದಾಳಿಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದ್ದು, ಭೂಸೇನೆ ಹಾಗೂ ವಾಯುಪಡೆಯ ಎರಡೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ಲಡಾಖ್​ಗೆ ರವಾನಿಸಲಾಗಿದೆ. ಇದರ ಜತೆಗೆ ಮುಂಜಾಗ್ರತಾ ಕ್ರಮವಾಗಿ ಪೂರ್ವ ಲಡಾಖ್ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಸಹ ಸಿದ್ಧವಾಗಿರಿಸಲಾಗಿದೆ.

    ಕಳೆದ ಎರಡು ವಾರಗಳಲ್ಲಿ ಚೀನಾ ಸೇನೆ ಸುಖೋಯ್ -30 ನಂತಹ ಭಾರೀ ಯುದ್ಧ ವಿಮಾನಗಳು ಹಾಗೂ ಅವುಗಳ ಬಾಂಬ್​ಗಳನ್ನು ಗಡಿಗೆ ತೆಗೆದುಕೊಂಡು ಬಂದಿದೆ. ಈ ವಿಮಾನಗಳು ಭಾರತದ ಗಡಿಯ 10 ಕಿ.ಮೀ ಅಂತರದಲ್ಲಿ ಹಾರಾಟ ನಡೆಸುತ್ತಿವೆ. ಹೀಗಾಗಿ ಯಾವುದೇ ಸಂಭಾವ್ಯ ದಾಳಿ ತಡೆಗಟ್ಟಲು ಭಾರತ ತಯಾರಿ ನಡೆಸಿದೆ. ಜತೆಗೆ ಭಾರತಕ್ಕೆ ಆದಷ್ಟು ಶೀಘ್ರದಲ್ಲಿ ರಷ್ಯಾದಿಂದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಲಭಿಸಲಿದ್ದು, ಅದನ್ನು ಚೀನಾ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಸೆಕೆಂಡ್​ಗಳಲ್ಲಿ ವಿಮಾನ ಉಡಿಸ್: ಭಾರತದ ತ್ವರಿತ ಪ್ರತಿಕ್ರಿಯೆ ವಾಯು ರಕ್ಷಣಾ ವ್ಯವಸ್ಥೆ ಆಕಾಶ್ ಕ್ಷಿಪಣಿಯನ್ನು ಒಳಗೊಂಡಿದೆ. ವೇಗವಾಗಿ ಚಲಿಸುವ ಯುದ್ಧ ವಿಮಾನಗಳು ಮತ್ತು ಡ್ರೋನ್​ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ. ಎತ್ತರದ ಪರ್ವತ ಪ್ರದೇಶದಲ್ಲಿ ನಿಯೋಜಿಸಲು ಸೂಕ್ತವಾಗುವಂತೆ ಅದರಲ್ಲಿ ಈಗ ಹಲವು ಮಾರ್ಪಾಡುಗಳು ಮತ್ತು ನವೀಕರಣಗಳನ್ನು ಮಾಡಲಾಗಿದೆ.

    ದೊಡ್ಡ ಬೆಲೆ ತೆರಬೇಕಾಗುತ್ತದೆ:  ಪೂರ್ವ ಲಡಾಖ್​ನಲ್ಲಿ ಭಾರತದ ವಿರುದ್ಧ ಆಕ್ರಮಣಕಾರಿ ಮಿಲಿಟರಿ ನಡೆ ಅನುಸರಿಸಿದ ಚೀನಾ ಅದಕ್ಕಾಗಿ ದಶಕಗಳ ಕಾಲ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಸೇನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜತೆಗಿನ ಗಡಿ ವಿವಾದ, ಹಾಂಕಾಂಗ್​ನಲ್ಲಿನ ದೌರ್ಜನ್ಯ, ಅಮೆರಿಕ ಮತ್ತು ಆಸ್ಟ್ರೇಲಿಯಾ ಜೊತೆಗಿನ ವಾಣಿಜ್ಯ ಸಮರ ಚೀನಾವನ್ನು ವಿಶ್ವದಲ್ಲಿ ಪ್ರತ್ಯೇಕಿಸುತ್ತಿವೆ. ಲಡಾಖ್ ವಿಚಾರದಲ್ಲಿ ಕ್ಯಾತೆ ತೆಗೆದಿದ್ದ ಚೀನಾ ಇದಕ್ಕಾಗಿ ಕಳೆದೆರಡು ತಿಂಗಳಿಂದ ದೊಡ್ಡ ಪ್ರಮಾಣದ ಹಣ ಖರ್ಚು ಮಾಡಿದೆ. ಇಡೀ ಜಗತ್ತು ಕರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವಾಗ ಚೀನಾ ತೋರಿಸಿದ ವರ್ತನೆ ಅದರ ನೈಜ ಮುಖವನ್ನು ಅನಾವರಣ ಮಾಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

    ಚೀನಾದಿಂದ ಪಿಒಕೆ ಏರ್​ಬೇಸ್ ಬಳಕೆ?: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸ್ಕಾರ್ಡ ವಾಯುನೆಲೆಯಲ್ಲಿ ಚೀನಾದ ಇಂಧನ ತುಂಬುವ ವಿಮಾನ ಕಳೆದ ವಾರ ಲ್ಯಾಂಡ್ ಆಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪಿಒಕೆಯಲ್ಲಿನ ಎಲ್ಲ ವಾಯುನೆಲೆಗಳ ಮೇಲೆ ಭಾರತ ಹದ್ದಿನ ಕಣ್ಣಿಟ್ಟಿದೆ. ಪೂರ್ವ ಲಡಾಖ್​ನಲ್ಲಿ ಚೀನಾದ ಚಟುವಟಿಕೆಗಳು ಹೆಚ್ಚಾಗಿದ್ದು, ಚೀನಾದ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ವಾಯುನೆಲೆಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಅನುವಾನ ವ್ಯಕ್ತವಾಗಿದೆ.

    ಯಾವುದೇ ಸ್ಥಿತಿ ಎದುರಿಸಲು ಸಿದ್ಧ: ಎರಡು ದಿನಗಳ ಕಾಲ ಲಡಾಖ್ ಭೇಟಿ ಮುಗಿಸಿಕೊಂಡು ದೆಹಲಿಗೆ ಹಿಂದಿರುಗಿರುವ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ, ಪ್ರಧಾನಿ ಮೋದಿಗೆ ಸ್ಥಿತಿ ಕುರಿತು ವಿವರಣೆ ನೀಡಿದ್ದಾರೆ. ಚೀನಿಯರು ಎಲ್​ಎಸಿ ಉದ್ದಕ್ಕೂ ಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ. ಭಾರತ ಕೂಡ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ. ಚೀನಾದ ಆಕ್ರಮಣ, ದುಷ್ಕೃತ್ಯ ತಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ನರವಾಣೆ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಗಡಿಯಲ್ಲಿ ಮತ್ತೆ ಕುತಂತ್ರ: ಚೀನಾ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಬಳಿಯ ಪಾಂಗೊಂಗ್ ತ್ಸೋ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ತಂದು ತನ್ನ ಸ್ಥಾನಗಳನ್ನು ಬಲಪಡಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ. ಫಿಂಗರ್ 4 ಪ್ರದೇಶದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿಯನ್ನೂ ಪ್ರಾರಂಭಿಸುತ್ತಿದೆ. ಕಳೆದ 8 ವಾರಗಳಲ್ಲಿ ಗಡಿಯಲ್ಲಿ ಚೀನಾ ಹಲವು ನಿರ್ಮಾಣ ಕಾಮಗಾರಿಗಳನ್ನು ನಡೆಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸರಕು ಆಮದು-ರಫ್ತಿಗೆ ಸಮಸ್ಯೆ: ಚೀನಾ ಮತ್ತು ಭಾರತದ ಸಂಬಂಧ ಹದಗೆಟ್ಟಿರುವುದು ಉಭಯ ದೇಶಗಳ ನಡುವಿನ ಆಮದು ಮತ್ತು ರಫ್ತು ವಹಿವಾಟಿಗೆ ತೊಂದರೆಯಾಗಿದೆ. ಭಾರತದ ವಿವಿಧ ಬಂದರುಗಳಿಗೆ ಚೀನಾದಿಂದ ಆಮದಾಗಿರುವ ಸರಕುಗಳನ್ನು ತಡೆಹಿಡಿಯಲಾಗಿದೆ. ಅವುಗಳ ವಿಲೇವಾರಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರ ಜತೆಗೆ ಭಾರತದಿಂದ ಚೀನಾಗೆ ರಫ್ತು ಮಾಡಲಾಗಿರುವ ಸರಕುಗಳು ಸಹ ಅಲ್ಲಿ ಇದೇ ತರನಾದ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಭಾರತೀಯ ರಫ್ತುದಾರರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ, ಹಾಂಕಾಂಗ್ ಮತ್ತು ಚೀನಾದಲ್ಲಿನ ಕಸ್ಟಮ್್ಸ ಅಧಿಕಾರಿಗಳು ಭಾರತದಿಂದ ರಫ್ತಾದ ಸರಕುಗಳನ್ನು ಕಳೆದ ಕೆಲ ದಿನಗಳಿಂದ ತಡೆಹಿಡಿದಿದ್ದಾರೆ. ಚೀನಾ ಮತ್ತು ಹಾಂಕಾಂಗ್​ನಲ್ಲಿ ತಡೆಹಿಡಿಯಲಾಗಿರುವ ಹೆಚ್ಚಿನ ಸರಕುಗಳಲ್ಲಿ ಸಾವಯವ ರಾಸಾಯನಿಕ ಸರಕು ಹೆಚ್ಚಿನ ಪ್ರಮಾಣದಲ್ಲಿವೆ. ಭಾರತದಿಂದ ರಫ್ತಾದ ಸರಕುಗಳನ್ನು ಚೀನಾ ಹೆಚ್ಚು ಪರಿಶೀಲಿಸುತ್ತಿದೆ. ಇದರಿಂದಾಗಿ ತೆರವು ಕಾರ್ಯ ವಿಳಂಬವಾಗುತ್ತಿದೆ. ಆದಾಗ್ಯೂ ಈ ಬಗ್ಗೆ ಉಭಯ ಕಡೆಗಳ ಮಧ್ಯೆ ಅಧಿಕೃತ ಸಂವಹನ ನಡೆದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಸರಕು ತೆರವು ವಿಳಂಬವಾದಷ್ಟೂ ರಫ್ತಿನ ವೆಚ್ಚ ಹೆಚ್ಚಳವಾಗುತ್ತದೆ. ಹೀಗಾಗಿ ಚೀನಾದ ಕಡೆಯಿಂದ ಸರಕುಗಳನ್ನು ಬೇಗ ತೆರವುಗೊಳಿಸಲು ಮಾತುಕತೆ ನಡೆಸಲಾಗುತ್ತಿದೆ.

    ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts