ಎಷ್ಟೇ ಹುಡುಕಿದ್ರೂ ಸಿಗಲಿಲ್ಲ; ಭರವಸೆಗಳು ಸುಳ್ಳಾದ ಬೆನ್ನಲ್ಲೇ ನೇಣಿಗೆ ಶರಣಾದ ಯುವಕ, ಹೆತ್ತವರು ಕಣ್ಣೀರು | Suicide

ವಿಜಯವಾಣಿ (5)
Published on

Suicide Case: ಪ್ರೀತಿ ಮಾಡಿ ಮದುವೆ ಆಗಬೇಕು, ಪ್ರೀತಿಸಿದವರನ್ನೇ ಕೈಹಿಡಿಯಬೇಕು ಎಂಬುದು ಅನೇಕ ಯುವಕ-ಯುವತಿಯರ ಹೆಬ್ಬಯಕೆ. ಆದ್ರೆ, ಎಲ್ಲರ ಜೀವನದಲ್ಲಿಯೂ ಹೀಗೆ ಆಗಬೇಕು, ಆಗುತ್ತದೆ ಎನ್ನುವುದು ಹುಸಿ ನಂಬಿಕೆ. ಇದು ಸಾಧ್ಯವಿಲ್ಲ. 23-24ರ ವಯಸ್ಸಿನಲ್ಲಿ ಮನಸ್ಸು ಗೊಂದಲಮಯ, ದುಡುಕಿ ತಪ್ಪು ದಾರಿ ಹಿಡಿಯುವುದು ಸಾಮಾನ್ಯ. ಆದರೆ, ಭವಿಷ್ಯದ ಬಗ್ಗೆ, ಹೆತ್ತು-ಹೊತ್ತು ಸಾಕಿದ ಪೋಷಕರ ಕುರಿತು ಕಿಂಚಿತ್ತು ಯೋಚನೆ ಮಾಡದೆ ದುಡುಕಿ ಜೀವನ, ಜೀವವನ್ನೇ ಅಂತ್ಯಗೊಳಿಸುವ ನಿರ್ಧಾರ ಎಂದಿಗೂ ಕೈಗೊಳ್ಳಬಾರದು. ಸದ್ಯ ಈ ಯುವಕ ಕೂಡ ಅದೇ ತಪ್ಪನ್ನು ಮಾಡಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರೀತಿಸಿ ಮದುವೆಯಾಗುವ ಆಸೆ ಹೊಂದಿದ್ದ ಈ ಯುವಕನಿಗೆ ತಾನು ಅಂದುಕೊಂಡಿದ್ದು ಈಡೇರಲಿಲ್ಲ. ಕನಿಷ್ಠ ಯಾರಾದರೂ ಸಿಕ್ಕರೆ, ಮನೆಯವರಿಗೆ ತೋರಿಸಿ ದಾಂಪತ್ಯ ಜೀವನಕ್ಕೆ ಕಾಲಿಡುವ ಆಶಯವನ್ನು ಹೊಂದಿದ್ದ. ಆದರೆ, ಎಷ್ಟೇ ಹುಡುಕಿದರೂ, ಎಲ್ಲಿಯೂ ಈತನಿಗೆ ವಧು ಸಿಗಲಿಲ್ಲ, ಯಾರೂ ಒಪ್ಪಿಗೆ ಸೂಚಿಸಲಿಲ್ಲ. ತನ್ನ ಮುಂದಿದ್ದ ಭರವಸೆಗಳೆಲ್ಲವೂ ಹುಸಿಯಾದ ಬೆನ್ನಲ್ಲೇ ಮನನೊಂದ ಯುವಕ ನೇಣಿಗೆ ಶರಣಾಗುವ ಮೂಲಕ ಸಾವಿನಲ್ಲಿ ದುರಂತ ಅಂತ್ಯ ಕಂಡಿದ್ದಾನೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವಕನನ್ನು ತೆಲಂಗಾಣದ ಮಂಡಲದ ಮದೂರು ಗ್ರಾಮದ ಶಿವರಾಜ್ (24) ಎಂದು ಗುರುತಿಸಲಾಗಿದೆ. ಎಸ್‌ಐ ನಾರಾಯಣ ಗೌಡ್ ಮಾತನಾಡಿ, ಕಳೆದ ಕೆಲವು ದಿನಗಳಿಂದ ಮದುವೆಗಾಗಿ ಸಂಗಾತಿಯನ್ನು ಹುಡುಕುತ್ತಿದ್ದ. ಆದರೆ ಎಲ್ಲಿಯೂ ಈತನಿಗೆ ವಧು ಸಿಕ್ಕಿಲ್ಲ. ಇದು ಅವನನ್ನು ಭಾರೀ ಖಿನ್ನತೆಗೆ ದೂಡಿತ್ತು. ಗುರುವಾರ (ಮಾ.13) ರಾತ್ರಿ ಜಮೀನಿಗೆ ಹೋಗಿ, ವಾಪಸ್ ಬರುವುದಾಗಿ ಹೇಳಿ ಮನೆಯಿಂದ ಹೋದವನು ಮತ್ತೆ ಹಿಂತಿರುಗಲಿಲ್ಲ. ಕಡೆಗೆ ಜಮೀನಿನಲ್ಲಿ ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದರು ಎಂದು ಹೇಳಿದರು.

ಜಮೀನಿನಲ್ಲಿ ಪುತ್ರನ ಶವ ಕಂಡ ತಂದೆ ಯಾದಗಿರಿ, ಶುಕ್ರವಾರ (ಮಾ.14) ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಖಾಕಿ ಪಡೆ ಸದ್ಯ ತನಿಖೆ ಆರಂಭಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net