ಗಂಡನನ್ನು ಕೊಲ್ಲಲು ಆಕೆ... ಪಹಲ್ಗಾಮ್​ ಸಂತ್ರಸ್ತೆ ಬಗ್ಗೆ ನಾಲಿಗೆ ಹರಿಬಿಟ್ಟ ಯುವಕನಿಗೆ ಬಿಗ್​ ಶಾಕ್​! Pahalgam Terrorist Attack

Pahalgam Terrorist Attack
Published on

Pahalgam Terrorist Attack : ಕಾಶ್ಮೀರದ ಪಹಲ್ಗಾಮ್​ನ ಭಯೋತ್ಪಾದಕ ದಾಳಿಯಲ್ಲಿ ಗುಂಡೇಟಿಗೆ ಬಲಿಯಾದ ವ್ಯಕ್ತಿಯೊಬ್ಬನ ಸಾವಿಗೆ ಆತನ ಪತ್ನಿಯೇ ಕಾರಣ ಎಂದು ಆರೋಪಿಸಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಮತ್ತು ಆಧಾರರಹಿತ ಪೋಸ್ಟ್​ ಹಂಚಿಕೊಂಡಿದ್ದಕ್ಕೆ ಮಧ್ಯಪ್ರದೇಶದ ಜಬಲ್ಪುರದ ಯುವಕನೊಬ್ಬನನ್ನು ಬಂಧಿಸಲಾಗಿದೆ.

ಬಂಧಿತನನ್ನು ಒಸಾಫ್​ ಖಾನ್​ ಎಂದು ಗುರುತಿಸಲಾಗಿದೆ. ಈತ ವೈದ್ಯಕೀಯ ವೃತ್ತಿ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಏಪ್ರಿಲ್​ 22ರಂದು ಪಹಲ್ಗಾಮ್​ನಲ್ಲಿ ಉಗ್ರರು ನಡೆಸಿದ ಹತ್ಯಾಕಾಂಡದಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದಾರೆ. ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ತನ್ನ ಗಂಡನ ಶವದ ಮುಂದೆಯೇ ಪತ್ನಿ ಮೌನವಾಗಿ ಕುಳಿತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯಿತು.

ಇದೀಗ ಈ ಪೋಸ್ಟ್​ ಅನ್ನು ಹಂಚಿಕೊಂಡಿರುವ ಒಸಾಫ್​, ತನ್ನ ಗಂಡನನ್ನು ಕೊಲೆ ಮಾಡಲು ಆಕೆಯೇ ಶೂಟರ್​ಗಳನ್ನು ನೇಮಿಸಿಕೊಂಡಿದ್ದಳು ಎಂದು ಆಧಾರರಹಿತ ಆರೋಪ ಮಾಡಿದ್ದ. ಈ ಮಹಿಳೆಯನ್ನು ತನಿಖೆ ಮಾಡಬೇಕು. ಬಹುಶಃ ಅವಳು ಶೂಟರ್ ಅನ್ನು ನೇಮಿಸಿಕೊಂಡು ಅವಕಾಶ ಸಿಕ್ಕ ಕ್ಷಣದಲ್ಲೇ ತನ್ನ ಗಂಡನನ್ನು ಕೊಲ್ಲುವಂತೆ ಮಾಡಿರಬಹುದು ಎಂದು ಒಸಾಫ್​ ಖಾನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದು, ತಕ್ಷಣ ವೈರಲ್​ ಆಗಿ, ವ್ಯಾಪಕ ಖಂಡನೆಗೆ ಗುರಿಯಾಯಿತು.

ದಾಳಿ ನಡೆಯುವ ಒಂದು ವಾರಕ್ಕೂ ಮುಂಚೆಯೇ ಆ ಮಹಿಳೆ ಮದುವೆಯಾಗಿದ್ದರು. ಘಟನೆ ನಡೆದ ಕೆಲ ಸಮಯದ ಬಳಿಕ ವಿಡಿಯೋ ಹೇಳಿಕೆ ನೀಡಿರುವ ಮಹಿಳೆ, ತಾವು ಎದುರಿಸಿದ ಆಘಾತವನ್ನು ವಿವರಿಸಿದರು. ನಾವು ಭೇಲ್​ಪುರಿ ತಿನ್ನುತ್ತಿದ್ದೆವು, ಬಂದೂಕುಧಾರಿಯೊಬ್ಬ ನನ್ನ ಪತಿಯನ್ನು ನೀನು ಮುಸ್ಲಿಮಾ ಎಂದು ಕೇಳಿ, ಮುಸ್ಲಿಂ ಅಲ್ಲ ಎಂದು ಗೊತ್ತಾದ ಬಳಿಕ ಗುಂಡು ಹಾರಿಸಿದನು ಎಂದು ಮಹಿಳೆ ಕಣ್ಣೀರಿಡುತ್ತಾ ಹೇಳಿದರು.

ಇನ್ನು ಒಸಾಫ್​ ಖಾನ್ ಅವರು ಮಾಡಿದ ಪೋಸ್ಟ್‌ನಿಂದ ಕೋಪಗೊಂಡ ಸ್ಥಳೀಯ ನಿವಾಸಿ ಅಭಯ್ ಶ್ರೀವಾಸ್ತವ್, ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದು, ಇದೀಗ ಅಸಾಫ್​​ ಖಾನ್​ನನ್ನು ಬಂಧಿಸಲಾಗಿದೆ.

ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲುಗಳಲ್ಲಿ ಐದರಿಂದ ಆರು ಬಂದೂಕುಧಾರಿಗಳು ನಡೆಸಿದ ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾಗಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ಹತ್ಯಾಕಾಂಡದ ಹೊಣೆಯನ್ನು ಹೊತ್ತುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net