

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರೇ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಬಾಪೂಜಿನಗರದ ನಿವಾಸಿ ಕೌಶಿಕ್ ಅಲಿಯಾಸ್ ಕರಿಯಾ(26) ಕೊಲೆಯಾದವನು.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲಾರ ಮೂಲದ ಕೌಶಿಕ್ ಬ್ಯಾಟರಾಯನಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ೨೦೨೦ ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಬಳಿಕ ಜಾಮೀನು ಪಡೆದು ಬಂದು ಕ್ಯಾಬ್ ಓಡಿಸುತ್ತಿದ್ದ. ಭಾನುವಾರ ತಡರಾತ್ರಿ ೧.೩೦ ರ ಸಮಯದಲ್ಲಿ ತನ್ನ ಇಬ್ಬರು ಸ್ನೇಹಿತರಾದ ಚಂದು ಮತ್ತು ಮನೋಹರ್ ಎಂಬುವರ ಜತೆ ಮದ್ಯಸೇವಿಸುತ್ತಿದ್ದ. ಈ ವೇಳೆ ಯಾವುದೋ ವಿಚಾರಕ್ಕೆ ಗಲಾಟೆಯಾಗಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿಗಳು ಬಿಯರ್ ಬಾಟಲಿನಿಂದ ಹಲ್ಲೆ ನಡೆಸಿ, ನಂತರ ತಲೆ ಮೇಲೆ ಕಲ್ಲು ಎತ್ತಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರು ದೌಡಾಯಿಸಿದ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಸುಳಿವು ಪತ್ತೆಯಾಗಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.