

ಗಾಜಿಯಾಬಾದ್: ವೃದ್ಧನೊಬ್ಬ ಯುವತಿಗೆ ಸಾಲ ಕೊಟ್ಟು, ಆಕೆ ಸಾಲವನ್ನು ವಾಪಾಸು ಕೊಡದಿದ್ದಾಗ ಸೆಕ್ಸ್ ಆಫರ್ ಮಾಡುತ್ತಾನೆ. ಇದಾದ ಒಂದೇ ವರ್ಷದಲ್ಲಿ ಆತ ಸೂಟ್ಕೇಸ್ ಒಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ಜ್ಞಾನ ಪ್ರಕಾಶ್(65) ಪ್ರೀತಿ ಹೆಸರಿನ ಯುವತಿಗೆ 2018ರಲ್ಲಿ 40 ಸಾವಿರ ರೂಪಾಯಿ ಸಾಲ ಕೊಟ್ಟಿದ್ದ. ನಂತರ 2019ರಲ್ಲಿ ಮದುವೆಯಾಗಬೇಕೆಂಬ ಕಾರಣಕ್ಕೆ ಆಕೆ ಮತ್ತೆ 1 ಲಕ್ಷ ರೂಪಾಯಿ ಸಾಲವನ್ನು ವೃದ್ಧನಿಂದ ಪಡೆದಿದ್ದಾಳೆ. ಆದರೆ ಆ ಸಾಲವನ್ನು ವಾಪಾಸು ಕೊಡಲು ಆಕೆಯಿಂದ ಸಾಧ್ಯವಾಗಿಲ್ಲ. ಅದಕ್ಕೆ ಜ್ಞಾನ ಪ್ರಕಾಶ್ ಒಂದು ಹೊಸ ದಾರಿಯನ್ನು ಕಂಡುಕೊಂಡಿದ್ದಾನೆ. ನೀನು ನನಗೆ ಸಾಲ ವಾಪಾಸು ಮಾಡುವುದು ಬೇಡ, ಆದರೆ ನನ್ನ ಜತೆ ಸೆಕ್ಸ್ ಮಾಡು ಎಂದು ಕೇಳಿದ್ದಾನೆ. ಬೇರೆ ದಾರಿಯಿಲ್ಲದೆ ಪ್ರೀತಿ ಅದಕ್ಕೆ ಒಪ್ಪಿ, ಆತನೊಂದಿಗೆ ಸಂಬಂಧ ಹೊಂದಿದ್ದಾಳೆ.
ಪ್ರಿತಿ ಮತ್ತು ಜ್ಞಾನ ಪ್ರಕಾಶ್ನ ಅಕ್ರಮ ಸಂಬಂಧ ಸುಮಾರು ಒಂದು ವರ್ಷ ನಡೆದಿದೆ. ಅಷ್ಟರಲ್ಲಿ ಪ್ರೀತಿಯ ಗಂಡ ವಿನೋದ್ಗೆ ಈ ವಿಚಾರ ಗೊತ್ತಾಗಿದೆ. ಹೇಗಾದರೂ ಮಾಡಿ ಈ ಸಂಬಂಧಕ್ಕೆ ಅಂತ್ಯ ಹಾಡಬೇಕೆಂದು ದಂಪತಿ ಒಂದು ಉಪಾಯ ಮಾಡಿದ್ದಾರೆ. ಜನವರಿ 4ರಂದು ಪ್ರೀತಿ ಜ್ಞಾನ ಪ್ರಕಾಶ್ಗೆ ಕರೆ ಮಾಡಿ, ಸಂಜೆ ನಾಲ್ಕು ಗಂಟೆ ಹೊತ್ತಿಗೆ ಮನೆಗೆ ಬರಲು ಹೇಳಿದ್ದಾಳೆ. ಅದರಂತೆ ಆತ ಮನೆಯಲ್ಲಿ ಸ್ನೇಹಿತನ ಮನೆಗೆ ಹೋಗುವುದಾಗಿ ಸುಳ್ಳು ಹೇಳಿ, ಪ್ರೀತಿಯ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಆತನಿಗೆ ಕಂಠ ಪೂರ್ತಿ ಕುಡಿಸಿ, ಕೊಲೆ ಮಾಡಿದ್ದಾರೆ. ವೃದ್ಧನ ಮೃತ ದೇಹವನ್ನು ಸೂಟ್ ಕೇಸ್ ಒಂದಕ್ಕೆ ತುಂಬಿ ಡ್ರೈನೇಜ್ ಒಳಗೆ ಬಿಸಾಕಿದ್ದಾರೆ.
ಈ ಕೊಲೆಯ ನಡೆಯುವಷ್ಟರಲ್ಲಿ ವೃದ್ಧನ ಡೆಬಿಟ್ ಕಾರ್ಡನ್ನು ಎತ್ತಿಕೊಂಡ ಪ್ರೀತಿ ಅದರಿಂದ 50 ಸಾವಿರ ಹಣವನ್ನು ಡ್ರಾ ಮಾಡಿದ್ದಾಳೆ. ಸ್ನೇಹಿತನ ಮನೆಗೆ ಹೋದ ವೃದ್ಧ ಒಂದು ದಿನವಾದರೂ ವಾಪಾಸು ಬಾರದಿದ್ದುದ್ದನ್ನು ಕಂಡು ಗಾಬರಿಗೊಂಡ ಕುಟುಂಬ ಕಾಣೆಯಾಗಿರುವುದಾಗಿ ದೂರು ನೀಡಿದೆ. ವೃದ್ಧನ ಬಗ್ಗೆ ಮಾಹಿತಿ ಕಲೆ ಹಾಕಲಾರಂಭಿಸಿದ ಪೊಲೀಸರಿಗೆ ಕಾಣೆಯಾದ ದಿನವೇ ಆತನ ಖಾತೆಯಿಂದ 50 ಸಾವಿರ ರೂಪಾಯಿ ಡ್ರಾ ಆಗಿರುವುದು ತಿಳಿದುಬಂದಿದೆ. ಯಾವ ಎಟಿಎಂನಿಂದ ಹಣ ಡ್ರಾ ಆಗಿದೆ ಎನ್ನುವುದನ್ನು ಪತ್ತೆ ಹಚ್ಚಿ, ಅದರ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ ದಂಪತಿ ಸಿಕ್ಕಿಬಿದ್ದಿದ್ದಾರೆ. ಇದೀಗ ಆರೋಪಿ ದಂಪತಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್)