

ಬೀದರ್: ಜಿಲ್ಲೆಯ ಹುಮನಾಬಾದ್ ತಾಲೂಕಿನ ಚಂದನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಕಲಿತ ಶಾಲೆಗೆ ಕೊಡುಗೆ ಎಂಬ ಪರಿಕಲ್ಪನೆ ಹುಟ್ಟುಹಾಕಿದ್ದು, ಹಳೇ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.
ಕರೆಗೆ ಪ್ರೇರಿತರಾಗಿ ಹಲವು ವಿದ್ಯಾರ್ಥಿಗಳು ಶಾಲೆಗೆ ಕೈಲಾದಷ್ಟು ಕೊಡುಗೆ ನೀಡುತ್ತಿದ್ದು, ಈ ಪೈಕಿ ಅಂಗವಿಕಲರೊಬ್ಬರು ಉಚಿತವಾಗಿ ಕಾವಲುಗಾರ (ವಾಚ್ವುನ್) ಸೇವೆಗೆ ಸೈ ಎಂದಿದ್ದು, ಈ ಸೇವಾಭಾವ, ಕಲಿತ ಶಾಲೆ ಋಣ ತೀರಿಸಬೇಕೆಂಬ ಕಾಳಜಿ ಸಮಾಜಕ್ಕೆ ಹೊಸ ಸಂದೇಶ ರವಾನಿಸಿದೆ.
ಎರಡು ತಿಂಗಳ ಹಿಂದೆ ಕಲಿತ ಶಾಲೆಗೆ ನನ್ನ ಕೊಡುಗೆ ಎಂಬ ಪ್ರಯೋಗಕ್ಕೆ ಚಾಲನೆ ನೀಡಲಾಗಿದ್ದು, ವಿವಿಧೆಡೆ ಇರುವ ಹಳೇ ವಿದ್ಯಾರ್ಥಿಗಳು ಶಾಲೆಗೆ ದೌಡಾಯಿಸಿ ತಮ್ಮಿಂದ ಆದಷ್ಟು ಕೊಡುಗೆ ನೀಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಅಲ್ಪ ಅವಧಿಯಲ್ಲೇ ಎಲ್ಲರ ಗಮನ ಸೆಳೆಯುವಂಥ ಕೆಲಸಗಳು ನಡೆದಿವೆ.
7ನೇ ತರಗತಿವರೆಗೆ ಕಲಿತ ಗ್ರಾಮದ ಕಡು ಬಡವ, ಅನಾಥ ಹಾಗೂ ಅಂಗವಿಕಲ ಮಾರುತಿ ರಾಮಣ್ಣ ದುಬುಲಗುಂಡೆ (35) ಕೊಡುಗೆ ನೀಡಲು ಏನೂ ಇಲ್ಲದ್ದರಿಂದ ಶಾಲೆಗೆ ಕಾವಲುಗಾರ ಸೇವೆಗೆ ಸೈ ಎಂದಿದ್ದಾರೆ. ಪಾರ್ಶ್ವವಾಯು (ಲಕ್ವ)ದಿಂದ ಎಡಗೈ ಸ್ವಾಧೀನವಿಲ್ಲ. ದೇಹದ ಎಡಭಾಗ ಸ್ವಲ್ಪ ನಿಸ್ತೇಜಗೊಂಡಿದೆ. ಆದರೂ ಕಲಿತ ಶಾಲೆಗೆ ಕೊಡುಗೆ ನೀಡುವೆ ಎಂದು ನಿಶ್ಚಯಿಸಿ ವೇತನರಹಿತ ಕಾವಲುಗಾರ ಕೆಲಸದಲ್ಲೇ ಅಕ್ಷರದ ಋಣ ತೀರಿಕೆಯ ತೃಪ್ತಿ ಕಾಣುತ್ತಿದ್ದಾರೆ.