

ವಂದೂರು: ನಿಮ್ಮ ಮನೆಯ ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಅದನ್ನು ಆದಷ್ಟು ಬೇಗ ಪಾವತಿ ಮಾಡಿ ಎಂದು ದೂರವಾಣಿ ಕರೆ ಮೂಲಕ ಹೇಳಿದ ವಿದ್ಯುತ್ ಇಲಾಖೆಯ ಅಧಿಕಾರಿ ಮಾತಿಗೆ ಕೆರಳಿದ ವ್ಯಕ್ತಿ, ಇದು ನನಗೆ ಸಿಟ್ಟು ತರಿಸುತ್ತಿದೆ ಎಂದು ಮನೆಯಲ್ಲಿದ್ದ ಹರಿತವಾದ ಮಚ್ಚನ್ನು ಕೈಗೆತ್ತಿಕೊಂಡು, ಅಧಿಕಾರಿಯಿದ್ದ ಕಚೇರಿಗೆ ನುಗ್ಗಿ ಆತನ ಮೇಲೆ ಹಲ್ಲೆಗೈದಿದ್ದಾನೆ. ಈ ಭಯಾನಕ ಘಟನೆ ಕೇರಳದ ವಂದೂರು ತಾಲೂಕಿನಲ್ಲಿ ವರದಿಯಾಗಿದೆ.
ಕರೆ ಮಾಡಿ ಹೇಳಿದ ಅಧಿಕಾರಿಯನ್ನು ಗುರಿಯಾಗಿಸಿಕೊಂಡ ವ್ಯಕ್ತಿ, ವಂತೂರು ಕೆಎಸ್‌ಇಬಿ ಸೆಕ್ಷನ್ ಆಫೀಸ್‌ನ ಲೈನ್‌ಮ್ಯಾನ್ ವರ್ಗದಲ್ಲಿದ್ದ ಸಿ.ಸುನೀಲ್ ಬಾಬು (39) ಎಂಬುವವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಅಧಿಕಾರಿಯನ್ನು ವಂದೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ. ಸಹಾಯಕ ಇಂಜಿನಿಯರ್ ದೂರಿನ ಮೇರೆಗೆ ಪಲ್ಲಿಕುನ್ ತಾಚುಪರಂಪನ್ನ ನಿವಾಸಿ ಝಕರಿಯಾ ಸಾದಿಕ್ನನ್ನು (48) ಪೊಲೀಸರು ವಶಕ್ಕೆ ಪಡೆದಿದ್ದಾರೆ.
"ಆರೋಪಿ ಜಕಾರಿಯಾ ಸಾದಿಕ್, ಕತ್ತಿ ಹಿಡಿದು ಸಿಟ್ಟಿನಿಂದ ಕೆಎಸ್‌ಇಬಿ ಕಚೇರಿ ಒಳಗೆ ನುಗ್ಗಿದ್ದಾನೆ. ಈ ವೇಳೆ ತಾನು ಯಾರನ್ನು ಹುಡುಕಿಕೊಂಡು ಕಚೇರಿಗೆ ಬಂದಿದ್ದನೋ, ಅದೇ ವ್ಯಕ್ತಿ ತಮ್ಮ ಕ್ಯಾಬಿನ್ನಲ್ಲಿ ಕುಳಿತಿದ್ದನ್ನು ಕಂಡು, ಏಕಾಏಕಿ ಮಚ್ಚಿನಲ್ಲಿ ಕತ್ತರಿಸಲು ಹೋಗಿದ್ದಾನೆ. ಆದರೆ, ಅದೃಷ್ಟವಶಾತ್ ಅಧಿಕಾರಿ ಆ ಏಟಿನಿಂದ ತಪ್ಪಿಸಿಕೊಂಡಿದ್ದಾನೆ. ತನ್ನನ್ನು ತಡೆಯಲು ಬಂದ ಉಳಿದ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಕಿರಾತಕ, ಸುನೀಲ ಬಾಬು ಕುತ್ತಿಗೆ ಹಾಗೂ ದೇಹದ ಕೆಲ ಭಾಗಕ್ಕೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).