VIDEO| ಹಾಡಹಗಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ

Assault
Published on

ಹೈದರಾಬಾದ್​: ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಸೂರ್ಯಪೇಟ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಪೊಲೀಸರು ಓರ್ವ ಸಾಫ್ಟ್​ವೇರ್​ ಇಂಜಿನಿಯರ್​ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದವರನ್ನು ಸಂತೋಷ್​ ಎಂದು ಗುರುತಿಸಲಾಗಿದ್ದು, ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬಂಧಿತರು ಕೃಷ್ಣ, ಮಣದೀಪ್​, ಮಹೇಶ್​, ಪ್ರೇಮ್​ ನಾಯ್ಡು ಎಂದು ತಿಳಿದು ಬಂದಿದೆ. ಹಣ ಕೊಡುವ ವಿಚಾರವಾಗಿ ಸಂತೋಷ್​ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ಧಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

ಪ್ರಕರಣದ ಹಿನ್ನಲೆ

ಗಾಯಾಳು ಸಂತೋಷ್​ ಹಾಗೂ ಬಂಧಿತ ಆರೋಪಿ ಕೃಷ್ಣ ಇಬ್ಬರು ಸ್ನೇಹಿತರಾಗಿದ್ದು, ಹಣಕಾಸಿನ ವಿಚಾರವಾಗಿ ವೈಷಮ್ಯ ಬೆಳೆದಿತ್ತು. ಸಂತೋಷ್ ಈ ಹಿಂದೆ​ ಕೃಷ್ಣನ ಮೇಲೆ ಎರಡು ಬಾರಿ ಕೊಲೆ ಯತ್ನ ನಡಿಸಿದ್ದ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತೋಷ್ ಪರಿಚಯಸ್ಥರಿಂದ ಕೃಷ್ಣನಿಗೆ 10 ಸಾವಿರ ರೂಪಾಯಿ ಹಣವನ್ನು ಸಾಲವನ್ನಾಗಿ ಕೊಡಿಸಿದ್ದ. ಕೆಲವು ದಿನಗಳ ನಂತರ ಹಣವನ್ನು ಹಿಂತಿರುಗಿಸುವಂತೆ ಹೇಳಿದ್ದ, ಆದರೆ, ಕಾರಣಾಂತರಗಳಿಂದ ಪಡೆದುಕೊಂಡಿದ್ದ ಹಣ ವಾಪಸ್​ ಮಾಡದೆ ಕೃಷ್ಣ ಕಾಲಾವಕಾಶ ಕೇಳಿದ್ದ. ಇದರಿಂದ ಕುಪಿತಗೊಂಡಿದ್ದ ಸಂತೋಷ್ ಕೃಷ್ಣ ಮೇಲೆ ಕೊಲೆ ಯತ್ನ ನಡೆಸಿ ಹೈದರಾಬಾದಿಗೆ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ಹಿಂಪಡೆಯುವಂತೆ ಒತ್ತಡ

ಎರಡು ವರ್ಷಗಳ ನಂತರ ಸೂರ್ಯಪೇಟ್​ಗೆ ವಾಪಸ್​ ಆದ ಬಳಿಕ ಸಂತೋಷ್​ ಕೃಷ್ಣನಿಗೆ ಹಣ ಹಾಗೂ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದ. ಇದರಿಂದ ತೀವ್ರ ಸಿಟ್ಟಿಗೆದ್ದಿದ್ದ ಕೃಷ್ಣ ಪ್ರಕರಣ =ದ ಇನ್ನಿತರೆ ಆರೋಪಿಗಳ ಜೊತೆಗೂಡಿ ಸಂತೋಷ್​ನನ್ನು ಮುಗಿಸಲು ಸಂಚು ರೂಪಿಸಿದ್ದ.

ಅದರಂತೆ ಸೂರ್ಯಪೇಟ್​ನ ಜನನಿಬಿಡ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಆರೋಪಿಗಳು ಸಂತೋಷ್​ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net