

ಜಗತ್ತಿಗೆ ಕರೊನಾ ದಾಂಗುಡಿಯಿಟ್ಟ ಮೇಲೆ ಅದೆಷ್ಟು ಆತಂಕ ಸೃಷ್ಟಿಯಾಗಿದೆಯೋ ಅಷ್ಟೇ ವಿಚಿತ್ರ ಘಟನೆಗಳೂ ನಡೆಯುತ್ತಿವೆ.
ಬಹುತೇಕ ರಾಷ್ಟ್ರಗಳಲ್ಲಿ ಈ ಲಾಕ್ಡೌನ್ ಇದ್ದು, ಜನರು ಮನೆಯಿಂದ ಹೊರಬರುವುದು ದೊಡ್ಡ ಸಮಸ್ಯೆಯಾಗಿದೆ. ಆದರೆ ಮನೆಯಲ್ಲಿ ಇದ್ದು ಅಭ್ಯಾಸವಿಲ್ಲದ ಜನ ಏನೇನೋ ಚಿತ್ರ-ವಿಚಿತ್ರ ಐಡಿಯಾಗಳನ್ನೆಲ್ಲ ಮಾಡಿದ್ದೆಲ್ಲ ಹಳೇ ಸುದ್ದಿ.
ಇದೀಗ ಹೊಸದಾಗಿ ಒಂದು ಘಟನೆ ಬೆಳಕಿಗೆ ಬಂದಿದೆ. ಇದರ ವೈರಲ್ ವಿಡಿಯೋ ನೋಡಿದರೆ ನಗಬೇಕೋ...ಆ ವ್ಯಕ್ತಿಯ ಬೇಜವಾಬ್ದಾರಿತನಕ್ಕೆ ಬೈಯಬೇಕೋ ಗೊತ್ತಾಗದು...
ಇದು ಯುಎಸ್ನ ಕ್ಯಾಲಿಫೋರ್ನಿಯಾದಿಂದ ವರದಿಯಾದ ಘಟನೆ. ಹೈವೇಯಲ್ಲಿ ನಡೆದ ಒಂದು ಸನ್ನಿವೇಶವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.
ಯುಎಸ್ನ ಚಿರೋಕೀ ರಸ್ತೆಯ ಸರಕು ಸಾಗಣೆ ಮಾರ್ಗದಲ್ಲಿ ರೆಡ್ವೈನ್ ತುಂಬಿದ ಟ್ಯಾಂಕರ್ ಹೊತ್ತ ಟ್ರಕ್ವೊಂದು ಹೋಗುತ್ತಿತ್ತು. ಅದರ ಹಿಂದೆ ಇದ್ದ ಕಾರಿನಲ್ಲಿ ಗೇಬ್ರಿಯಲ್ ಮೊರೆನೊ (39) ಎಂಬಾತ ಪ್ರಯಾಣ ಮಾಡುತ್ತಿದ್ದ. ಗೇಬ್ರಿಯಲ್ನ ಕಾರು ಕೆಲವೇ ಕ್ಷಣದಲ್ಲಿ ಟ್ರಕ್ನ್ನು ಓವರ್ಟೇಕ್ ಮಾಡಿ, ಅದರ ಮುಂದೆ ಬಂತು. ಹಾಗೇ ಏನೋ ಅಪಾಯವಿದೆ ಎಂಬಂತೆ ಕಾರಿನ ಕೆಂಪು ದೀಪಗಳು ಬೆಳಗಿದವು. ಅದನ್ನು ನೋಡಿ ವೈನ್ ಇದ್ದ ಟ್ರಕ್ ಡ್ರೈವರ್ ತನ್ನ ವಾಹನವನ್ನು ನಿಲ್ಲಿಸಿದ.
ಆತ ಲಾರಿಯನ್ನು ನಿಲ್ಲಿಸುತ್ತಿದ್ದಂತೆ ಕಾರಿನ ಬಾಗಿಲು ತೆರೆದು, ಬರೀ ಅಂಡರ್ವೇರ್ನಲ್ಲಿದ್ದ ಗೇಬ್ರಿಯಲ್ ಮೊರೆನೋ ಓಡಿ ಬಂದ. ಆಗ ಲಾರಿ ಡ್ರೈವರ್ಗೆ ಏನೋ ಅನುಮಾನ ಬಂದು ವಾಹನವನ್ನು ಮುಂದೆ ಚಾಲನೆ ಮಾಡಿದ. ಆದರೆ ಟ್ರಕ್ ವೇಗ ಕಡಿಮೆ ಇದ್ದುದರಿಂದ ಗೇಬ್ರಿಯಲ್ ಒಮ್ಮೆಲೆ ಅದನ್ನು ಹತ್ತಿದ. ಅಷ್ಟೇ ಅಲ್ಲ, ಟ್ರಕ್ನಲ್ಲಿ ಇದ್ದ ಏಣಿಯ ಮೂಲಕ ವೈನ್ ಟ್ಯಾಂಕ್ ಹತ್ತಿಯೇ ಬಿಟ್ಟ..!
ಆದರೆ ಆತ ಹತ್ತಿದ್ದು ಚಾಲಕನಿಗೆ ಗೊತ್ತಾಗಲಿಲ್ಲ. ತಾನು ಹೇಗೂ ಲಾರಿ ಚಾಲನೆ ಮಾಡಿಕೊಂಡು ಬಂದೆ ಎಂದು ಸುಮ್ಮನಿದ್ದ. ಆದರೆ ಗೇಬ್ರಿಯಲ್ ಮಾತ್ರ ಅಲ್ಲಿಯೇ ನಿಂತು ರೆಡ್ ವೈನ್ ಟ್ಯಾಂಕ್ನ ಮುಚ್ಚಲು ತೆರೆದು ಅದನ್ನು ಕುಡಿಯಲು ಪ್ರಾರಂಭಿಸಿದ. ಮನಸೋ ಇಚ್ಛೆ, ಹೊಟ್ಟೆತುಂಬ ಕುಡಿದ. ಟ್ರಕ್ ಚಲಿಸುತ್ತಿತ್ತು..ಈತ ಕುಡಿಯುತ್ತಲೇ ಇದ್ದ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಲಾರಿಯ ತೂಕ ಕಡಿಮೆಯಾಗುತ್ತಿರುವುದು ಅದರ ಮಾಪಕದಿಂದ ಗೊತ್ತಾಯಿತು. ಚಾಲಕ ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದ. ಲಾರಿಯ ಅಡಿಯಲ್ಲಿ ಬಗ್ಗಿ ನೋಡಿದ. ಹಾಗೇ ಒಳ ಹೊಕ್ಕು ನೆಲದ ಮೇಲೆ ಮಲಗಿ ನೋಡಿದರೆ ಅಲ್ಲಿ ಸ್ವಲ್ಪ ಮಟ್ಟಿಗೆ ವೈನ್ ಸುರಿಯುತ್ತಿತ್ತು. ಕೂಡಲೇ ಆತ ಪೊಲೀಸರಿಗೆ ಫೋನ್ ಮಾಡಿದ.
ಅಷ್ಟರಲ್ಲಾಗಲೇ ಹೈವೇ ಮಧ್ಯದಲ್ಲಿ ಗೇಬ್ರಿಯಲ್ ಮೊರೆನೊ ಟ್ರಕ್ ಹತ್ತಿದ ವಿಡಿಯೋ ವೈರಲ್ ಆಗುತ್ತಿತ್ತು.
ಪೊಲೀಸರಿಗೂ ಮಾಹಿತಿ ಹೋಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿಕೊಂಡು ಹೋದರು.
ಲಾರಿಯ ಟ್ಯಾಂಕ್ನಿಂದ ಸುಮಾರು 1,000 ಗ್ಯಾಲನ್ನಷ್ಟು ವೈನ್ ಖಾಲಿಯಾಗಿತ್ತು. ಗೇಬ್ರಿಯಲ್ ಅದು ಹೇಗೆ ಅಷ್ಟು ವೈನ್ ಕುಡಿದರು ಎಂದು ಪೊಲೀಸರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಡಿಲಿಕೆ ಎಂದು ಬೀದಿಗಿಳಿದರೆ ಅಪಾಯ
ಬಂಧಿಸಿ ಕೆಲವೇ ಹೊತ್ತಲ್ಲಿ ಆತನನ್ನು ಬಿಡಲಾಯಿತು. ಹೊರಹೋಗುತ್ತಿದ್ದಂತೆ ಸಮೀಪದಲ್ಲಿದ್ದ ವಾಹನ ನಿಲುಗಡೆ ಸ್ಥಳದಲ್ಲಿ ಗಲಾಟೆ ಮಾಡಿಕೊಂಡಿದ್ದರಿಂದ ಮತ್ತೆ ಅರೆಸ್ಟ್ ಮಾಡಲಾಯಿತು. ಅಷ್ಟಕ್ಕೂ ಸುಮ್ಮನಾಗದ ಗೇಬ್ರಿಯಲ್ ಜೈಲಿನಲ್ಲಿ ಸ್ಯಾಂಡ್ವಿಚ್ ಕೊಡಲಿಲ್ಲ ಎಂದು ಕೂಗಾಡಿದ. ಮತ್ತೆ ಕುಡಿಯಲು ವೈನ್ ಕೇಳಿದ..!