

INS Vikrant: ನಾನು ಪ್ರಧಾನಿ ಕಚೇರಿ ಅಧಿಕಾರಿ, ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆ ಬಗ್ಗೆ ಮಾಹಿತಿ ನೀಡುವಂತೆ ಕರೆ ಮಾಡಿದ್ದ ಕೇರಳ ಮೂಲದ ವ್ಯಕ್ತಿಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಮುಜಿಬ್ ರೆಹಮಾನ್ ಎಂದು ಗುರುತಿಸಲಾಗಿದೆ. ಈತ ಕೇರಳದ ಕೋಜಿಕೋಡ್ನ ನಡಕ್ಕವು ಗ್ರಾಮದ ನಿವಾಸಿ. ಆರೋಪಿಯು ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾನೆ, ಆದರೆ ಇದನ್ನು ಇನ್ನೂ ಪರಿಶೀಲಿಸಬೇಕಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ವಿಭಾಗದ ಅಡಿಯಲ್ಲಿ ಸೋಗು ಹಾಕಿ ವಂಚನೆ ಮಾಡಿದ್ದಕ್ಕಾಗಿ ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಧಿಕೃತ ರಹಸ್ಯ ಕಾಯ್ದೆಯಡಿ ಆರೋಪಗಳು ಜಾಮೀನು ರಹಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಕರೆ ಮಾಡಿದ ವ್ಯಕ್ತಿ ತನ್ನನ್ನು ರಾಘವನ್ ಎಂದು ಗುರುತಿಸಿಕೊಂಡು ಪ್ರಧಾನಿ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಕರೆ ಬಂದ ಕೂಡಲೇ ಬಂದರು ಪೊಲೀಸರಿಗೆ ಬೆಳಿಗ್ಗೆ 9.15ರ ಸುಮಾರಿಗೆ ಮಾಹಿತಿ ನೀಡಲಾಯಿತು.