ಹೋಟೆಲ್​ನ ಟಾಯ್ಲೆಟ್​ನಲ್ಲಿ ಕೈಚಳಕ ತೋರಿಸಲು ಹೋಗಿ ಸಿಕ್ಕಿಬಿದ್ದ! ಇಂತವರ ಬಗ್ಗೆ ನೀವೂ ಎಚ್ಚರವಾಗಿರಿ!

man
Published on

ಮುಂಬೈ: ಹೋಟೆಲ್​ ಒಂದರಲ್ಲಿ ಕುಳಿತಿದ್ದ ಮಹಿಳೆ ಟಾಯ್ಲೆಟ್​ ಬಳಸಲೆಂದು ಟಾಯ್ಲೆಟ್​ಗೆ ಹೋದಾಗ ತನ್ನ ಕರಾಮತ್ತು ತೋರಲು ಮುಂದಾದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಗಿಳೆ ವಹಿಸಿದ ಮುಂಜಾಗ್ರತೆಯಿಂದಾಗಿ ಆಕೆಯ ಮಾನ ಉಳಿದಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಹೋಟೆಲ್​ ಬಳಿಯಲ್ಲೇ ಸಣ್ಣದೊಂದು ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದ ಸಮೀರ್​ ಹಮೀದ್​ ಶೈಖ್​ ಶೌಚಕ್ಕೆ ಹೋಟೆಲ್​ನ ಟಾಯ್ಲೆಟ್​ನ್ನೇ ಬಳಸುತ್ತಿದ್ದ. ಆ ದಿನ ಕೂಡ ಅದೇ ರೀತಿ ಟಾಯ್ಲೆಟ್​ಗೆಂದು ಹೋಟೆಲ್​ಗೆ ತೆರಳಿದ್ದಾನೆ. ಆ ವೇಳೆ ಅಲ್ಲಿ ಊಟ ಮಾಡುತ್ತಿದ್ದ 30 ವರ್ಷದ ಮಹಿಳೆಯೊಬ್ಬಳು, ಟಾಯ್ಲೆಟ್​ ಬಳಸಲು ಎದ್ದು ಬಂದಿದ್ದಾಳೆ. ಆಕೆ ಟಾಯ್ಲೆಟ್​ ಒಳಗಿದ್ದಾಗ ಸಮೀರ್​ ತನ್ನ ಕೈ ಚಳಕ ತೋರಿಸಲು ಮುಂದಾಗಿದ್ದಾನೆ.

ಟಾಯ್ಲೆಟ್​ನ ಬಾಗಿಲ ಕೆಳಗೆ ಮೊಬೈಲ್​ ಇಟ್ಟು ಚಿತ್ರೀಕರಿಸಲು ಸಮೀರ್​ ಪ್ರಯತ್ನಿಸಿದ್ದಾನೆ. ಆದರೆ ಅದನ್ನು ಗಮನಿಸಿದ ಮಹಿಳೆ ಜೋರಾಗಿ ಚೀರಿಕೊಂಡಿದ್ದಾಳೆ. ತಕ್ಷಣ ಹೋಟೆಲ್​ ಸಿಬ್ಬಂದಿಗಳು ಬಂದಿದ್ದು, ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಈ ವಿಚಾರವಾಗಿ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಹೋಟೆಲ್​ ಸಿಸಿಟಿವಿಯ ದೃಶ್ಯಾವಳಿಗಳ ಸಹಾಯದಿಂದ ಸಮೀರ್​ನನ್ನು ಗುರುತಿಸಲಾಗಿದ್ದು, ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net