ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ಗೆ ಕೊನೆಗೂ ಸಿಕ್ಕ ನಾಯಕಿ : ‘ಎಲ್ಲಮ್ಮ’ಗೆ ಉಧೋ ಎಂದ ಮಮಿತಾ

ಮಮಿತಾ ಬೈಜು
ಮಮಿತಾ ಬೈಜು
Published on

ಪ್ರಮುಖ ಮುಖ್ಯಾಂಶಗಳು

  • ನಾಯಕಿ ಆಯ್ಕೆಯೇ ಎಲ್ಲಮ್ಮಗೆ ದೊಡ್ಡ ತಲೆನೋವು
  • ಸಾಯಿಪಲ್ಲವಿ, ಮೃಣಾಲ್ ಬಳಿಕ ಬೇರೆ ನಟಿಯತ್ತ ಚಿತ್ತ
  • ದಕ್ಷಿಣದಲ್ಲಿ ಮಿಂಚುತ್ತಿರುವ ಮಮಿತಾ ಬೈಜು ನಾಯಕಿಯಾಗಿ ಆಯ್ಕೆ
ತೆಲುಗು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ (ಡಿಎಸ್‌ಪಿ) ‘ಎಲ್ಲಮ್ಮ’ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿ ನಾಯಕನಾಗುತ್ತಿರುವುದು ಗೊತ್ತೆ ಇದೆ. ನಿರ್ದೇಶಕ ‘ಬಳಗಂ’ ಖ್ಯಾತಿಯ ವೇಣು ಯೆಲ್ದಾಂಡಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಮಾಡಿರುವ ಡಿಎಪ್‌ಪಿ ಪೋಸ್ಟರ್‌ನಿಂದಾಗಿ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡಿದ್ದು, ಶೂಟಿಂಗ್ ತೆರಳಲು ಸಿದ್ಧತೆ ನಡೆಸುತ್ತಿದೆ. ಆದರೆ, ಈ ಮಧ್ಯೆ ಚಿತ್ರತಂಡಕ್ಕೆ ನಾಯಕಿ ಆಯ್ಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಮೊದಲಿಗೆ ಸಾಯಿ ಪಲ್ಲವಿ ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ‘ರಾಮಾಯಣ’, ಮಣಿರತ್ನಂ ನಿರ್ದೇಶನದ ಸಿನಿಮಾ ಸೇರಿ ಕೆಲ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿರುವ ಕಾರಣಕ್ಕೆ ನಟಿಸಲು ಹಿಂದೆ ಸರಿದಿದ್ದಾರೆ. ಅದಾದ ನಂತರ ಚಿತ್ರತಂಡ ಮೃಣಾಲ್ ಠಾಕೂರ್‌ರತ್ತ ಮುಖ ಮಾಡಿ, ಎರಡು-ಮೂರು ಸುತ್ತಿನ ಮಾತುಕತೆ ಕೂಡ ನಡೆಸಿತ್ತು. ಆದ್ಯಾವ ಕಾರಣವೋ ಗೊತ್ತಿಲ್ಲ. ಮೃಣಾಲ್‌ನಿಂದ ಕೂಡ ಹಿಂದೆ ಸರಿದಿರುವ ಚಿತ್ರತಂಡ ಪ್ರೇಮುಲು’ ಖ್ಯಾತಿಯ ಮಮಿತಾ ಬೈಜುರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಗ್ರಾಮೀಣ ಹಿನ್ನೆಲೆಯ ಕಥೆ ಇದಾಗಿರುವುದರಿಂದ ಡಿ-ಗ್ಲಾಮ್ ಪಾತ್ರಕ್ಕೆ ಮಮಿತಾ ಬೈಜು ಒಪ್ಪುತ್ತಾರೆ ಎಂಬ ತೀರ್ಮಾನಕ್ಕೆ ಚಿತ್ರತಂಡ ಬಂದಿದೆಯಂತೆ. ಇನ್ನು ಇತ್ತೀಚೆಗೆ ರಿಲೀಸ್ ಆಗಿದ್ದ ತಮಿಳಿನ ‘ಕರ’ ಚಿತ್ರದಲ್ಲಿ ಮಮಿತಾ ಡಿ-ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜತೆಗೆ ಹಂತ ಹಂತವಾಗಿ ದಕ್ಷಿಣ ಚಿತ್ರರಂಗದಲ್ಲಿ ಮಮಿತಾ ಜನಪ್ರಿಯರಾಗುತ್ತಿರುವುದು ಆಯ್ಕೆಗೆ ಕಾರಣವು ಇರಬಹುದು. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಬೇಕಷ್ಟೆ. ಸದ್ಯ ಮಮಿತಾ ತಮಿಳಿನ ‘ಜನ ನಾಯಗನ್’, ‘ವಿಶ್ವನಾಥ್ ಆ್ಯಂಡ್ ಸನ್’ ಚಿತ್ರ ಇದೇ ಆಗಸ್ಟ್ 14ರಂದು ಬಿಡುಗಡೆಯಾಗುತ್ತಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net