ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹ

Published on

ಬೆಂಗಳೂರು:
ಕೊಲ್ಕತ್ತಾದ ಸರ್ಕಾರಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ತರಬೇತಿ ನಿರತ ವೈದ್ಯೆಯ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣದ ನೈತಿಕ ಹೊಣೆ ಹೊತ್ತು ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಿನನಿತ್ಯ ಅಲ್ಲಿ ಮಹಿಳೆಯರ ಮೇಲೆ, ಯುವಕರ ಮೇಲೆ ಹಲ್ಲೆ, ಕೊಲೆ, ಸುಲಿಗೆ, ಗೂಂಡಾಗಿರಿ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಯಾರ ಮೇಲೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.
ಆ.9ರಂದು ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಭೀಕರ ಕೊಲೆಯಾದರೂ ಸಹ ತನಿಖೆಯನ್ನು ಅಲ್ಲಿನ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನ ಪಟ್ಟಿತು. ಆದರೆ ದೇಶದ್ಯಾಂತ ವೈದ್ಯರ, ವಿದ್ಯಾರ್ಥಿಗಳ ಪತಿಭಟನೆ ಹಾಗೂ ಹೈಕೋರ್ಟ ತೀರ್ಪಿನ ನಂತರ ಸಿಬಿಐ ಗೆ ವಹಿಸಿದೆ ಎಂದು ವಿವರಿಸಿದ್ದಾರೆ.
ಈ ಪ್ರಕರಣವನ್ನು ನಿಭಾಯಿಸುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ. ಆದರೆ ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ. ಈಗ ವೈದ್ಯ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂದು ಪಾದಯಾತ್ರೆ ಮಾಡುತ್ತಿರುವುದು ನಾಚಿಕೆಗೇಡು ಎಂದಿದ್ದಾರೆ.
ಅಲ್ಲಿನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮೇಲೆ ದಾಳಿ ತಡೆಗಟ್ಟಲು ಸರ್ಕಾರ ವಿಫಲವಾಗಿದೆ. ಅಲ್ಲಿನ ಸರ್ಕಾರ ಈ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಎಲ್ಲ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸುರಕ್ಷತಾ ಕ್ರಮ ಅಳವಡಿಸಬೇಕು. ವೈದ್ಯರಿಗೆ, ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net