

ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿಯಿವೆ. ಈಗಾಗಲೇ ಟಿಎಂಸಿಯ ಕೆಲ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಲಾರಂಭಿಸಿದ್ದಾರೆ. ರಾಜ್ಯಾದ್ಯಂತ ಚುನಾವಣಾ ಪ್ರಚಾರ ಆರಂಭಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಮಾವೋವಾದಿಗಳಿಗಿಂತ ಡೇಂಜರಸ್ ಪಕ್ಷ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮಾವೋವಾದಿಗಳಿಗಿಂತ ಡೇಂಜರಸ್ ಪಕ್ಷ. ಯಾರ್ಯಾರು ನಮ್ಮನ್ನು ಬಿಟ್ಟು ಅಲ್ಲಿಗೆ ಹೋಗಲು ಬಯಸುತ್ತೀರೋ ಅವರು ಹೋಗಬಹುದು. ಆದರೆ ನಾವು ಎಂದಿಗೂ ಅವರಿಗೆ ತಲೆ ಬಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಮಂಗಳವಾರದಂದು ಪುರುಲಿಯಾದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ.
ನೀವೆಲ್ಲರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದರೆ. ಆದರೆ ಏನಾಯಿತು? ನೀವು ಗೆಲ್ಲಿಸಿದ ಬಿಜೆಪಿ ಅಭ್ಯರ್ಥಿ ಎಂದೂ ನಿಮ್ಮ ಬಳಿ ಬರಲೇ ಇಲ್ಲ. ಬಿಜೆಪಿ ಬರೀ ಸುಳ್ಳು ಹೇಳುತ್ತದೆ. ಚುನಾವಣೆ ಸಮಯದಲ್ಲಿ ಸುಳ್ಳಿನ ಸರಮಾಲೆಯನ್ನೇ ಹೆಣೆದು ಚುನಾವಣೆಯ ನಂತರ ಮಾಯವಾಗಿಬಿಡುತ್ತಾರೆ ಎಂದು ದೂರಿದ್ದಾರೆ. (ಏಜೆನ್ಸೀಸ್)