ಮಮತಾ ಬ್ಯಾನರ್ಜಿ ರಾಜೀನಾಮೆ ಕೇಳುವವರ ಬೆರಳು ಕತ್ತರಿಸಿ: ಟಿಎಂಸಿ ಸಂಸದನ ಸೆನ್ಸೇಷನಲ್‌ ಹೇಳಿಕೆ ವೈರಲ್‌

tmc
Published on

ಪಶ್ಚಿಮ ಬಂಗಾಳ: ಕೋಲ್ಕತ್ತಾದ ಆರ್​ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ನಡೆದ ವಿದ್ಯಾರ್ಥಿನಿಯ ಕೊಲೆ ಬಗ್ಗೆ ಇಡೀ ದೇಶವೇ ಮರುಗುತ್ತಿದೆ. ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ರಾಜ್ಯ ಸರ್ಕಾರದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಅವರನ್ನು ನಿಂದಿಸುತ್ತಿರುವ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬೆರಳುಗಳನ್ನು ಕತ್ತರಿಸಬೇಕು ಎಂದು ಟಿಎಂಸಿ ಸಚಿವೆ ಉದ್ಯಾನ್ ಗುಹಾ ಅವರು ಹೇಳಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ಅವರ ಈ ಮಾತು ಭಾರಿ ವಿವಾದಕ್ಕೆ ಗುರಿಯಾಗಿದೆ. ಆದರೆ ಆ ವಿಡಿಯೋ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲು ಸುದ್ದಿಸಂಸ್ಥೆ ಪಿಟಿಐಗೆ ಸಾಧ್ಯವಾಗಿಲ್ಲ.

ಮಮತಾ ಬ್ಯಾನರ್ಜಿಯವರ ಬಗ್ಗೆ ಮಾತನಾಡುತ್ತಿರುವವರು, ಅವರ ಕಡೆಗೆ ಬೆರಳು ತೋರುತ್ತಿರುವವರು ಹಾಗೂ ಅವರ ರಾಜೀನಾಮೆ ಕೇಳುತ್ತಿರುವವರ ತಂತ್ರ ಎಂದಿಗೂ ಯಶಸ್ವಿಯಾಗುವುದಿಲ್ಲ. ಮಮತಾ ಬ್ಯಾನರ್ಜಿ ಅವರ ಕಡೆ ಬೆರಳು ತೋರುತ್ತಿರುವವರ ಬೆರಳುಗಳನ್ನು ಕತ್ತರಿಸಬೇಕು ಎಂದು ಅವರು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೇಲೆ ದಾಳಿ ನಡೆಸುತ್ತಿರುವಾಗಲೂ ಪೊಲೀಸರು ಲಾಠಿ ಚಾರ್ಜ್ ಮಾಡದೆ ಸುಮ್ಮನಿದ್ದರು. ಪಶ್ಚಿಮ ಬಂಗಾಳವನ್ನು ಮತ್ತೊಂದು ಬಾಂಗ್ಲಾದೇಶವಾಗಿ ಪರಿವರ್ತಿಸಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 15 ರಂದು ಗುಂಪೊಂದು ಆಸ್ಪತ್ರೆಯೊಳಗೆ ನುಗ್ಗೆ ತುರ್ತು ಚಿಕಿತ್ಸಾ ಘಟಕ ಅರೈಕೆ ವಿಭಾಗ ಹಾಗೂ ಔಷಧ ಮಳಿಗೆಯನ್ನು ಧ್ವಂಸ ಮಾಡಿತ್ತು.

ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಘಟನೆ ನಡೆದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಸಿಬಿಐ ಸತತ ಎರಡನೇ ದಿನ ಶನಿವಾರ ವಿಚಾರಣೆ ನಡೆಸಿತು. ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಶವ ಆಗಸ್ಟ್ 9ರಂದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net