ಸೋಮವಾರದಿಂದ ಹೋಟೆಲ್​, ರೆಸ್ಟೋರಂಟ್​ ಓಪನ್​; ಮಾಲ್​ಗಳಲ್ಲಿ ಕೈಕೈ ಹಿಡಿದು ಓಡಾಡೋಕಾಗಲ್ಲ; ಇರಲಿವೆ ಹಲವು ನಿರ್ಬಂಧ

mall
Published on

ನವದೆಹಲಿ: ಕಳೆದ ಎರಡು ತಿಂಗಳಿನಿಂದ ಮುಚ್ಚಿದ್ದ ಹೋಟೆಲ್​, ರೆಸ್ಟೋರಂಟ್​, ಮಾಲ್​ಗಳು ಸೋಮವಾರ (ಜೂನ್​ 8) ಆರಂಭವಾಗಲಿವೆ. ಇದಕ್ಕಾಗಿ ಹಲವು ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಗೃಹ ಸಚಿವಾಲಯ ಈಗಾಗಲೇ ಬಿಡುಗಡೆ ಮಾಡಿದೆ.

ಮಾಲ್​ಗಳು ಆರಂಭವಾದರೂ, ಅಲ್ಲಿನ ಚಿತ್ರಮಂದಿರಗಳು ಅಥವಾ ಮಲ್ಟಿಪ್ಲೆಕ್ಸ್​ಹಾಗೂ ಗೇಮಿಂಗ್​ ಸೆಂಟರ್​ಗಳನ್ನು ತೆರೆಯುವಂತಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಜತೆಗೆ, ಗ್ರಾಹಕರಿಗೂ ಹಲವು ನಿರ್ಬಂಧಗಳನ್ನು ವಿಧಿಸಿದರೆ ಅಚ್ಚರಿಯೇನಿಲ್ಲ.

ಹೋಟೆಲ್​ ಹಾಗೂ ರೆಸ್ಟೋರಂಟ್​ಗಳಲ್ಲಿ ಆಸನ ಸಾಮರ್ಥ್ಯದ ಶೇ.50 ಜನರಿಗೆ ಮಾತ್ರ ಅವಕಾಶವಿರಲಿದೆ. ಸೋಂಕು ಹರಡುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಜತೆಗೆ, ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಪೋಸ್ಟರ್​ ಮತ್ತಿತರ ಭಿತ್ತಿಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ.

ಗ್ರಾಹಕರು ಮಾಸ್ಕ್​ ಧರಿಸುವುದು ಕಡ್ಡಾಯ. ಅಂತೆಯೇ ಸಿಬ್ಬಂದಿ ಕೂಡ ಮಾಸ್ಕ್​ ಧರಿಸಿರಬೇಕು. ಹ್ಯಾಂಡ್​ ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಬಳಕೆ ಕಡ್ಡಾಯವಾಗಿದ್ದು, ರೋಗ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವೇಶವಿರಲಿದೆ. ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಕೆಲಸ ನಿರ್ವಹಿಸಬೇಕಿದೆ.

ಹಿರಿಯ ಸಿಬ್ಬಂದಿ, ಗರ್ಭಿಣಿಯರು, ದೀರ್ಘಕಾಲದ ರೋಗದಿಂದ ಬಳಲುತ್ತಿರುವವರು ಮೊದಲಾದವರನ್ನು ಜನರೊಂದಿಗೆ ನೇರ ಸಂಪರ್ಕ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸದಂತೆ ತಿಳಿಸಲಾಗಿದೆ. ಹೀಗಾಗಿ ಮಾಲ್​, ಹೋಟೆಲ್​ ರೆಸ್ಟೋರಂಟ್​ಗಳಲ್ಲಿ ಗ್ರಾಹಕರಿಗೂ ಇವನ್ನು ಅನ್ವಯಿಸಬಹುದು. ಏಕೆಂದರೆ, 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರುವುದು ಕ್ಷೇಮ ಎಂದು ಸರ್ಕಾರ ನಿರ್ದೇಶನ ನೀಡಿದೆ. ಹೀಗಾಗಿ ಹೋಟೆಲ್​, ಮಾಲ್​ಗಳಲ್ಲಿ ಇವರಿಗೆ ಪ್ರವೇಶ ನಿರಾಕರಿಸಿದರೆ ಅಚ್ಚರಿಯಿಲ್ಲ.

ಗ್ರಾಹಕರ ಗುರುತು, ಸಂಪರ್ಕ ಸಂಖ್ಯೆ ಮೊದಲಾದವುಗಳನ್ನು ಬಯಸಿದಲ್ಲಿ ತಪ್ಪೇನಿಲ್ಲ. ಕಾರ್ಡ್​ ಮೂಲಕ ಪಾವತಿಸಿದರೆ ಆ ಮೂಲಕ ನಿಮ್ಮನ್ನು ಗುರುತಿಸಲು ಅನುವಾಗುತ್ತದೆ. ಒಂದೇ ಕುಟುಂಬದವರಾದರೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕಾಗಿರುವುದರಿಂದ ದೂರ, ದೂರ ನಿಲ್ಲುವುದು ಅನಿವಾರ್ಯ. ಮಾಲ್​ ತೆರೆದಿದೆ ಎಂದು ಕೈಕೈ ಹಿಡಿದು ಜೋಡಿಯಾಗಿ ಸುತ್ತಲಾಗುವುದಿಲ್ಲ ಎಚ್ಚರವಿರಲಿ.....!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net