

ನವದೆಹಲಿ: ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪಿರುವ ಘಟನೆಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ರೈಲ್ವೇಯಲ್ಲಿ ಉಂಟಾಗಿರುವ ಬೃಹತ್ ಲೋಪಗಳಿಗೆ ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವರು ನೇರ ಹೊಣೆಯಾಗಬೇಕು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತರಿಗೆ ಸಂತಾಪವನ್ನು ವ್ಯಕ್ತಪಡಿಸಿ ಮತ್ತು ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಗಾಯಗೊಂಡವರೊಂದಿಗಿವೆ ಎಂದು ತಿಳಿಸಿದ್ದಾರೆ.ಸ್ವಪ್ರಚಾರದ ಯಾವುದೇ ಅವಕಾಶವನ್ನು ಪ್ರಧಾನಿ ಮೋದಿ ಬಿಡುವುದಿಲ್ಲ ಎಂದು ಟೀಕಿಸಿದ ಅವರು, ಉತ್ತರಪ್ರದೇಶದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪಿರುವುದು ಮೋದಿ ಸರ್ಕಾರವು ರೈಲು ಸುರಕ್ಷತೆಯನ್ನು ಹೇಗೆ ವ್ಯವಸ್ಥಿತವಾಗಿ ಅಪಾಯಕ್ಕೆ ತಳ್ಳಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಒಂದು ತಿಂಗಳ ಹಿಂದೆ ಸೀಲ್ದಾ-ಅಗರ್ತಲಾ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು 11 ಜನರು ಸಾವನ್ನಪ್ಪಿದ್ದರು ಎಂದು ಅವರು ಹೇಳಿದರು.
ಸ್ವಯಂಚಾಲಿತ ಸಿಗ್ನಲ್‌ಗಳ ವೈಫಲ್ಯ, ವಿವಿಧ ಹಂತಗಳಲ್ಲಿನ ಕಾರ್ಯಾಚರಣೆಗಳ ನಿರ್ವಹಣೆಯಲ್ಲಿನ ಲೋಪಗಳು ಮತ್ತು ಲೊಕೊ ಪೈಲಟ್‌ಗಳು ಮತ್ತು ರೈಲು ನಿರ್ವಾಹಕರೊಂದಿಗೆ ವಾಕಿ-ಟಾಕಿಗಳಂತಹ ನಿರ್ಣಾಯಕ ಸುರಕ್ಷತಾ ಸಾಧನಗಳ ಲಭ್ಯತೆಯಿಲ್ಲದಿರುವುದು ರೈಲು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತನಿಖಾ ವರದಿಯಲ್ಲಿರುವ ಕಾರಣಗಳಾಗಿವೆ ಎಂದು ತಿಳಿಸಿದರು.
ಸುಧಾರಿತ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅಪಘಾತಗಳನ್ನು ತಡೆಗಟ್ಟಲು ದೇಶದಾದ್ಯಂತ ಎಲ್ಲಾ ರೈಲ್ವೆ ಮಾರ್ಗಗಳಲ್ಲಿ ಆ್ಯಂಟಿ ಆರ್ಮರ್ ಸಿಸ್ಟಮ್ ಅನ್ನು ಆದಷ್ಟು ಬೇಗ ಅಳವಡಿಸಬೇಕು ಎಂಬುದು ನಮ್ಮ ಏಕೈಕ ಬೇಡಿಕೆ ಎಂದು ಮಲ್ಲಿಕಾರ್ಜುನ ಖರ್ಗೆ ಸರ್ಕಾರವನ್ನು ಒತ್ತಾಯಿಸಿದರು.
ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಹಳಿತಪ್ಪಿವೆ. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. (ಏಜೆನ್ಸೀಸ್)