

ಕೋಲಾರ: ತೀವ್ರ ಕುತೂಹಲಗಳ ನಡುವೆ ನಡೆದ ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್&ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು 71,388 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ಮೊದಲ ಜೆಡಿಎಸ್ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕ್ಷೇತ್ರದಲ್ಲಿ ಒಟ್ಟು 17,26,914 ಮತದಾರರಿದ್ದು, ಆ ಪೈಕಿ 13,51,646 ಮಂದಿ ಮತ ಚಲಾಯಿಸಿದ್ದಾರೆ. ಚಲಾವಣೆಯಾಗಿರುವ ಮತಗಳ ಪೈಕಿ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು 6,91,481 ಮತಗಳನ್ನು ಗಳಿಸಿ 71,388 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ 6,20,093 ಮತ ಪಡೆದುಕೊಂಡು ಪರಾಭವಗೊಂಡಿದ್ದಾರೆ. ಇನ್ನು ಉಳಿದ 16 ಮಂದಿ ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅದರಂತೆ ಕೆಜಿಎ್ ಹಾಗೂ ಶಿಡ್ಲಟ್ಟ ಕ್ಷೇತ್ರ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಜೆಡಿಎಸ್ ಅಭ್ಯರ್ಥಿಗೆ ಬಹುಮತ ದೊರೆತಿದೆ.ಕೋಲಾರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯು ರಾಜಕೀಯ ಪಕ್ಷಗಳಿಗೆ ಸವಾಲಾಗಿತ್ತು. ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಅವರನ್ನು ಕಣಕ್ಕೆ ಇಳಿಸಿದರು. ಮಲ್ಲೇಶ್ಬಾಬು ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಸೋಲು ಅನುಭವಿಸಿದ್ದರು. ಇದರ ಅನುಕಂಪವೂ ಲಭಿಸಿದೆ, ಜತೆಗೆ ಮೈತ್ರಿ ಧರ್ಮಪಾಲನೆಯಾಗಿದ್ದು ಇದರ ಲಾಭ ದೊರೆತಿದೆ.
ಚುನಾವಣೆಯ ದಿನಾಂಕ ಘೋಷಣೆಯಾದರೂ ಕಾಂಗ್ರೆಸ್ನಲ್ಲಿ ಅಷ್ಟು ಬೇಗ ಟಿಕೆಟ್ ಗೊಂದಲ ಬಗೆಹರಿದಿರಲಿಲ್ಲ. ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಕೆ.ಆರ್.ರಮೇಶ್ಕುಮಾರ್ ತಂಡ ಹಾಗೂ ಎಡಗೈ ಸಮುದಾಯದ ಚಿಕ್ಕಪೆದ್ದಣ್ಣರಿಗೆ ಟಿಕೆಟ್ಗಾಗಿ ಸಚಿವ ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದಿದ್ದರು. ಇದರಿಂದಾಗಿ ಪಕ್ಷದ ಅಭ್ಯರ್ಥಿ ಘೋಷಣೆ ತಡವಾಯಿತು. ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ, ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಕಡೆಗಣಿಸಿದ್ದು ಸೇರಿದಂತೆ ಹಲವು ಪ್ರಮುಖ ಕಾರಣಗಳು ಗೆಲುವಿನ ಹಳಿಗೆ ಬರಲು ಅಡ್ಡಿಯಾದವು.