ಮಾಲಿಕಯ್ಯ, ಶಾರದಾ ಮೋಹನ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

congress logo
Published on

ಬೆಂಗಳೂರು: ಮಾಜಿ ಸಚಿವ, ಅ್ಜಲ್‌ಪುರ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಹಾಗೂ ಕುಮಟಾ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವರಿಬ್ಬರನ್ನೂ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಡಿಕೆಶಿ, ಮಾಲೀಕಯ್ಯ ಗುತ್ತೇದಾರ್ ಬಹಳ ವರ್ಷಗಳಿಂದ ನಮ್ಮ ಜತೆಗಿದ್ದವರು. ಕಾರಣಾಂತರಗಳಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಯಲ್ಲಿ ಭವಿಷ್ಯವಿಲ್ಲ ಎಂದು ಅರಿವಾಗಿ ಮತ್ತೆ ಮರಳಿ ಬಂದಿದ್ದಾರೆ ಎಂದರು.

ಈ ಹಿಂದೆ ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಮಾಲೀಕಯ್ಯ ಪಕ್ಷದ ಅನೇಕ ಹುದ್ದೆ ಅಲಂಕರಿಸಿ ಕಾಂಗ್ರೆಸ್ ಕಟ್ಟಿದ್ದಾರೆ. ಈಗ ಯಾವುದೇ ಷರತ್ತುಗಳನ್ನು ವಿಧಿಸದೆ ಮರಳಿ ಬಂದಿದ್ದಾರೆ. ನಮ್ಮ ಶಾಸಕ ಎಂ.ವೈ ಪಾಟೀಲ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇವರ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮರೆತು ಪಕ್ಷ ಕಟ್ಟಬೇಕು ಎಂಬುದು ಎಲ್ಲರ ಒಕ್ಕೊರಲಾಗಿದೆ ಎಂದು ಹೇಳಿದರು.

ಬಿಜೆಪಿ- ದಳ ತೊರೆದು ಆನೇಕ ಕಾರ್ಯಕರ್ತರು, ನಾಯಕರು ನಮ್ಮ ಕಡೆ ವಾಲುತ್ತಿದ್ದಾರೆ. ಸರಮಾಲೆಯಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಗೆ ಧ್ವನಿಯಿಲ್ಲ. ಅವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಆದ ಕಾರಣ ಸ್ಥಳೀಯ ಮಟ್ಟದಲ್ಲಿ ಯಾರು ಪಕ್ಷ ಸೇರ್ಪಡೆಯಾಗುತ್ತಾರೆಯೋ ಅವರನ್ನು ಸೇರಿಸಿಕೊಳ್ಳಬೇಕು ಎಂದು ಎಲ್ಲರಿಗೂ ಸೂಚನೆ ನೀಡಿದ್ದೇನೆ ಎಂದರು.

ಇದೇ ವೇಳೆ ಆಮ್ ಆದ್ಮಿ ಪಕ್ಷದ ನಟರಾಜ್ ಅವರು ಹಾಗೂ ಸಿದ್ದು ಸಾಲಮನಿ, ಕರುಣಾಕರ್ ಭಟ್, ರಾಮಣ್ಣ, ಮಲ್ಲೇಗೌಡ ಪಾಟೀಲ್, ರವಿ ಪಾಟೀಲ್, ಚಂದ್ರಕಾಂತ್, ಶಿವಪ್ಪ ಪಕ್ಷ ಸೇರ್ಪಡೆಯಾದರು. ಸಚಿವ ಪ್ರಿಯಾಂಕ್ ಖರ್ಗೆ, ರಾಜಣ್ಣ ಮತ್ತಿತರರು ಈ ವೇಳೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net